ಎಸ್‌ಯುವಿ ಹರಿಸಿ ಪತ್ರಕರ್ತನನ್ನು ಹತ್ಯೆ ಮಾಡಿದ ಕ್ರಿಮಿನಲ್

ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರಾಜಾಪುರದ ಸ್ಥಳೀಯ ಮರಾಠಿ ದಿನಪತ್ರಿಕೆಯೊಂದರ ಉದ್ಯೋಗಿ 48 ವರ್ಷದ ಪತ್ರಕರ್ತ ಶಶಿಕಾಂತ್‌ ವರಿಶೆ ಎಂಬವರ ಮೇಲೆ ಎಸ್‌ಯುವಿ ಹರಿಸಿ ಹತ್ಯೆ ಮಾಡಲಾಗಿದೆ. ವಾಹನದ ಚಾಲಕ ಪಂಡರಿನಾಥ್‌ ಅಂಬೇರ್ಕರ್‌ ಎಂಬಾತನನ್ನು ಬಂಧಿಸಲಾಗಿದೆ. ಸೋಮವಾರ ಶಶಿಕಾಂತ್‌ ಪಂಡರಿನಾಥ್‌ ವಿರುದ್ಧ ಬರೆದ ಲೇಖನವೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಇದೇ ಕಾರಣಕ್ಕೆ ಆತನ ಮೇಲೆ ಎಸ್‌ಯುವಿ ವಾಹನ ಹರಿಸಿ ಹತ್ಯೆ ಮಾಡಲಾಗಿತ್ತು.

ಬರ್ಸು ಎಂಬಲ್ಲಿ ತಲೆಯೆತ್ತುತ್ತಿರುವ  ರತ್ನಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ಗೆ ಕಂಪೆನಿಯ ಕಾಮಗಾರಿಗೆ ಸ್ಥಳೀಯರ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಶಶಿಕಾಂತ್‌ ಲೇಖನ ಬರೆದು ಪ್ರಕಟಿಸಿದ್ದರು. ‘ಮಹಾನಗರಿ ಟೈಮ್ಸ್‌’ನಲ್ಲಿ ಪ್ರಕಟವಾದ ಲೇಖನದೊಂದಿಗೆ ಪ್ರಧಾನಿ, ಸಿಎಂ ಮತ್ತು ಡಿಸಿಎಂ ಪಕ್ಕದಲ್ಲಿ ನಿಂತಿರುವ ಪಂಡರಿನಾಥ್‌ ಅಂಬೇರ್ಕರ್‌ ಫೋಟೋವನ್ನು ಪ್ರಕಟಿಸಿ ಪ್ರಧಾನಿ, ಸಿಎಂ ಮತ್ತು ಡಿಸಿಎಂ ಜೊತೆ ಫೋಟೋ ಕ್ಲಿಕ್ಕಿಸಿ ಕೊಂಡ ಕ್ರಿಮಿನಲ್‌ ಎಂದು ಪಂಡರಿನಾಥ್‌ ಅಂಬೇರ್ಕರ್‌ ಬಗ್ಗೆ ಉಲ್ಲೇಖಿಸಲಾಗಿತ್ತು.

ಲೇಖನದಲ್ಲಿ ಅಂಬೇರ್ಕರ್‌ನನ್ನು ಕ್ರಿಮಿನಲ್‌, ಆತ ರಿಫೈನರಿಯನ್ನು ಬೆಂಬಲಿಸುತ್ತಿದ್ದಾನೆ , ರಿಫೈನರಿ ವಿರೋಧಿಸುತ್ತಿರುವ ಸ್ಥಳೀಯರನ್ನು ಬೆದರಿಸಿದ್ದಕ್ಕಾಗಿ ಎಫ್‌ಐಆರ್‌ ಎದುರಿಸುತ್ತಿದ್ದಾನೆ ಎಂದು ಬರೆಯಲಾಗಿತ್ತು. ಇದನ್ನೇ ಕಾರಣವಾಗಿಟ್ಟುಕೊಂಡ ಪಂಡರಿನಾಥ್‌ ಅಂಬೇರ್ಕರ್‌ ರಾಜಾಪುರ್‌ ಹೆದ್ದಾರಿ ಸಮೀಪದ ಪೆಟ್ರೋಲ್‌ ಬಂಕ್‌ ಪಕ್ಕ ನಿಂತಿದ್ದ ಶಶಿಕಾಂತ್‌ ಮೇಲೆ ಎಸ್‌ಯುವಿ ಹರಿಸಿ ಕೆಲವು ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿ ಪರಾರಿಯಾಗಿದ್ದ.ಗಂಭೀರ ಗಾಯಗೊಂಡಿದ್ದ ಶಶಿಕಾಂತ್‌ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಫೆಬ್ರವರಿ 14 ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

LEAVE A REPLY

Please enter your comment!
Please enter your name here