ಮಂಗಳೂರು: 2014ರ ಫೆಬ್ರವರಿ 20ರಂದು ಆಗ್ರಾದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಗಿಳಿಯೊಂದು ಪ್ರಮುಖ ಸಾಕ್ಷಿಯಾಗಿದ್ದು ವಿಶೇಷ.
ಆಗ್ರಾದ ಪ್ರಮುಖ ಪತ್ರಿಕೆಯೊಂದರ ಎಡಿಟರ್ ಇನ್ ಚೀಫ್ ವಿಜಯ್ ಶರ್ಮಾ ಅವರ ಪತ್ನಿ ನೀಲಂ ಶರ್ಮಾ ಅವರ ಶವ ಅವರದ್ದೇ ಮನೆಯಲ್ಲಿ 2014ರ ಫೆಬ್ರವರಿ 20ರಂದು ಪತ್ತೆಯಾಗಿತ್ತು.
ಹತ್ಯಗೈದು ಮನೆಯನ್ನು ದೋಚಲಾಗಿತ್ತು. ಆದರೆ ಹಂತಕರ ಯಾವುದೇ ಸುಳಿವು ಪೊಲೀಸರಿಗೆ ಸಿಗದೆ ತನಿಖೆ ಹಳ್ಳ ಹಿಡಿದಿತ್ತು. ಅದರೆ 9 ವರ್ಷಗಳ ಬಳಿಕ ಈ ಹತ್ಯೆಗೆ ರೋಚಕ ತಿರುವು ಲಭಿಸಿತು. ಮೃತ ನೀಲಂ ಶರ್ಮಾ ಅವರ ಸಾಕು ಗಿಳಿ ಹತ್ಯೆಯ ಬಗ್ಗೆ ಮಹತ್ವದ ಸುಳಿವು ನೀಡಿತು. ಶರ್ಮಾ ಅವರ ಸೋದರ ಸಂಬಂಧಿಯ ಹೆಸರನ್ನು ಈ ಗಿಳಿಯು ಪದೇ ಪದೇ ಕೂಗತೊಡಗಿದ್ದರಿಂದ ಅನುಮಾನಗೊಂಡ ವಿಜಯ್ ಶರ್ಮಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಜಯ್ ಶರ್ಮಾ ನೀಡಿದ ಮಾಹಿತಿಯಂತೆ ಪೊಲೀಸರು ಆತನ ಸೋದರ ಸಂಬಂಧಿ ಆಶು ಎಂಬಾತನನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಈ ವೇಳೆ ಆರೋಪಿ ಆಶು ತನ್ನ ಸ್ನೇಹಿತ ರೊನ್ನಿ ಮಸೇ ಸಹಾಯದೊಂದಿಗೆ ನೀಲಂ ಅವರನ್ನು ಕೊಂದಿರುವುದಾಗಿ ತಪ್ಪೋಪ್ಪಿಕೊಳ್ಳುತ್ತಾನೆ. ತಪ್ಪು ಒಪ್ಪಿಗೆ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಮೊಹಮ್ಮದ್ ರಶೀದ್ ಆರೋಪಿಗಳಾದ ಆಶು ಮತ್ತು ರೊನ್ನಿ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ 72,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.