ಮಂಗಳೂರು (ಮುಂಬೈ): ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 50 ವರ್ಷದ ಮಹಿಳೆಯೊಬ್ಬರನ್ನು ಕಬ್ಬಿಣದ ಸರಪಳಿಯಲ್ಲಿ ಮರಕ್ಕೆ ಕಟ್ಟಿ ಹಾಕಿರುವುದು ಕಂಡು ಬಂದಿದ್ದು ಆಕೆಯ ಬಳಿ ಅಮೆರಿಕಾದ ಪಾಸ್‌ಪೋರ್ಟ್‌ನ ನಕಲು ಮತ್ತು ಆಧಾರ್ ಕಾರ್ಡ್ ಸಹಿತ ಇತರ ದಾಖಲೆಗಳು ಪತ್ತೆಯಾಗಿದ್ದು ಅದರಲ್ಲಿ ತಮಿಳುನಾಡಿನ ವಿಳಾಸವಿರುವುದು ಕಂಡು ಬಂದಿದೆ.
ಶನಿವಾರ ಸಂಜೆ ಸೊನುರ್ಲಿ ಗ್ರಾಮದ ಕುರಿಕಾಯುವವರೊಬ್ಬರಿಗೆ ಮಹಿಳೆಯ ಅಳು ಕೇಳಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಶೋಧಿಸಿದಾಗ ಮಹಿಳೆ ಸರಪಳಿ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯನ್ನು ಸಾವಂತವಾಡಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯ ಮಾನಸಿಕ ಸ್ಥಿತಿಯನ್ನು ಪರಿಗಣಿಸಿ ಗೋವಾ ಮೆಡಿಕಲ್ ಕಾಲೇಜಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಆಕೆ ಅಪಾಯದಿಂದ ಹೊರಗಿದ್ದಾರೆ ಆದರೆ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಆಕೆಯ ಬಳಿ ಮೆಡಿಕಲ್ ಪ್ರಿಸ್ಕ್ರಿಪ್ಶನ್ ಪತ್ತೆಯಾಗಿವೆ. ಮಹಿಳೆಯನ್ನು ಲಲಿತಾ ಕಾಯಿ ಎಂದು ಗುರುತಿಸಲಾಗಿದೆ ಹಾಗೂ ಆಕೆಯ ವೀಸಾ ಅವಧಿ ಮೀರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ರಾಷ್ಟ್ರೀಯತೆಯ ಬಗ್ಗೆ ತಿಳಿಯಲು ಪ್ರಯತ್ನಿಸಲಾಗುತ್ತಿದೆ. ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಯನ್ನೂ ಪೊಲೀಸರು ಸಂಪರ್ಕಿಸಿದ್ದಾರೆ.
ಮಹಿಳೆ ತನ್ನ ಹೇಳಿಕೆಯನ್ನು ನೀಡುವ ಸ್ಥಿತಿಯಲ್ಲಿಲ್ಲ. ಆಕೆ ಒಂದೆರಡು ದಿನ ಆಹಾರ ಸೇವಿಸಿಲ್ಲ ಎಂದು ತಿಳಿದು ಬಂದಿದೆ. ತಮಿಳುನಾಡಿನ ಮೂಲದ ಆಕೆಯ ಪತಿ ಆಕೆಯನ್ನು ಇಲ್ಲಿ ಕಟ್ಟಿ ಹಾಕಿ ಪರಾರಿಯಾಗಿರಬೇಕೆಂಬ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಸಂಬಂಧಿಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ತಮಿಳುನಾಡು, ಗೋವಾ ಮತ್ತು ಇತರ ಸ್ಥಳಗಳಿಗೆ ತೆರಳಿವೆ.