ಮಂಗಳೂರು (ಬೆಂಗಳೂರು): ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ. ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ಉತ್ತರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣೆಗಯನ್ನು ಸಾಧಿಸಿ ಉತ್ತರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಅಭಿವೃದ್ಧಿ ಅಂದರೆ ಕರ್ನಾಟಕ ಮಾದರಿ. 2023ರಲ್ಲಿ ಸ್ಪಷ್ಟ ಬಹುಮತದೊಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಳೆದ ಹದಿನೈದು ತಿಂಗಳಿನಲ್ಲಿ ಸ್ಪಷ್ಟ ಹೆಜ್ಜೆಗಳನ್ನ ಇಟ್ಟಿದ್ದೇವೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಜಾರಿಗೊಳಿಸಿದ್ದೇವೆ ಎಂದರು.
ಆರ್ಥಿಕ ಅಸಮಾನತೆಯಿಂದ ಬಸವಳಿದಿದ್ದ ಜನರಿಗೆ ಯೋಜನೆಗಳು ನೆಮ್ಮದಿ ತಂದಿವೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳಿಂದ 4-5 ಸಾವಿರ ರೂಪಾಯಿ ಲಭಿಸುತ್ತಿದೆ. ಪ್ರತಿ ತಿಂಗಳು ಫಲಾನುಭವಿ ಕುಟುಂಬಗಳಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಲಭಿಸುತ್ತಿದೆ. ಈ ಯೋಜನೆಗಳು ಮುಂದುವರೆಯಲಿವೆ ಎಂದು ಎರಡೆರಡು ಬಾರಿ ಒತ್ತಿ ಹೇಳುವ ಮೂಲಕ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗೋದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ಜನಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ರಾಜ್ಯದ ಜವಾಬ್ದಾರಿಯಾದರೆ, ಅವುಗಳಿಗೆ ಪೂರಕ ಸಂಪನ್ಮೂಲ ಒದಿಗಿಸುವುದು ಕೇಂದ್ರದ ಹೊಣೆಗಾರಿಕೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಆಶಯದಿಂದ ದೂರ ಸರಿಯುತ್ತಿದೆ. ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. ಸಂವಿಧಾನದ ಆಶಯಗಳನ್ನು ನಿರ್ಲಕ್ಷಿಸಿ ರಾಜ್ಯಗಳಿಗೆ ದೊರೆಯಬೇಕಾದ ಹಣಕಾಸಿನ ಪಾಲನ್ನು ನೀಡಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರದಿಂದ ಪರಿಹಾರ ಮೊತ್ತ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ. ಇದು ಜನಹಿತಕ್ಕೆ ಒಳ್ಳೆಯದಲ್ಲ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಮ್ಮ ಬೇಸರ ಹೊರ ಹಾಕಿದ್ದಾರೆ.