ಶೂಟೌಟ್‌ ಪ್ರಕರಣ-ಬನ್ನಂಜೆರಾಜ ಖುಲಾಸೆ

ಮಂಗಳೂರು: ಮಂಗಳೂರಿನಲ್ಲಿ ದಾಖಲಾಗಿದ್ದ 3 ಶೂಟೌಟ್‌ ಪ್ರಕರಣಗಳಲ್ಲಿ ಬನ್ನಂಜೆರಾಜನನ್ನು ಖುಲಾಸೆಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಈತನ ವಿರುದ್ದ ಪಾಂಡೇಶ್ವರ ಪೊಲೀಸ್‌ ಠಾಣೆ, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ಬನ್ನಂಜೆರಾಜ ಮತ್ತು ಆತನ ಸಹಚರರ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಘಟನೆಗಳ ವೇಳೆಯಲ್ಲಿ ಬನ್ನಂಜೆರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, 2015ರಲ್ಲಿ ಆಫ್ರಿಕಾದ ಮೊರಾಕ್ಕೋದಿಂದ ಆತನನ್ನು ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು.

2000ನೇ ಇಸವಿಯಲ್ಲಿ ಬಂಟ್ಸ್‌ ಹಾಸ್ಟೆಲ್‌ ನಿವಾಸಿ ಇರವಿನ್‌ ಪಿಂಟೋ ಮತ್ತು ಅವರ ಪತ್ನಿ ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಶೂಟೌಟ್‌ ಮಾಡಿ ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ, 2004ರಲ್ಲಿ ರೋಹನ್‌ ಕಾರ್ಪೋ ರೇಶನ್‌ ಮಾಲಕ ರೋಹನ್‌ ಮೊಂತೇರೋ ಅವರ ಕಚೇರಿಯ ಮೇಲೆ ಅಪರಿಚಿತರು ಗುಂಡು ಹಾರಿಸಿ, ಕೊಲೆ ಯತ್ನ ನಡೆಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ,  2011ರಲ್ಲಿ ಪೃಥ್ವಿ ಡೆವಲಪರ್ಸ್‌ ಮತ್ತು ಬಿಲ್ದರ್ಸ್‌ನ ಮಾಲಕ ಸುರೇಶ ಭಂಡಾರಿ ಅವರು ತನ್ನ ಹೆಂಡತಿ ಮತ್ತು ಮಗಳೊಂದಿಗೆ ಕದ್ರಿ ಪಾರ್ಕ್‌ ಬಳಿ ಕಾರಿನಲ್ಲಿದ್ದ ಸಮಯ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ರಿವಾಲ್ವರ್‌ನಿಂದ ಶೂಟೌಟ್‌ ಮಾಡಿ ಕೊಲೆ ಯತ್ನ ನಡೆಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಬನ್ನಂಜೆರಾಜನ ಬಂಧನದ ಬಳಿಕ ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಮೂರು ಪ್ರಕರಣಗಳನ್ನು ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿ ಅವರು ಬನ್ನಂಜೆ ರಾಜನನ್ನು ಖುಲಾಸೆ ಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪರವಾಗಿ ಪಿ.ಪಿ ಹೆಗ್ಡೆ ಅಸೋಸಿಯೇಟ್‌ನ ರಾಜೇಶ್‌ಕುಮಾರ್‌ ಅಮ್ಟಾಡಿ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here