ಜನರು ಮಣಿಪುರ ಸರಕಾರದಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ- ಪ್ರಧಾನಿಗೆ ಪತ್ರ ಬರೆದ ಬಿಜೆಪಿ ಶಾಸಕರು

    ಮಂಗಳೂರು: ಪ್ರಧಾನಿ ಕಚೇರಿಗೆ ಅಹವಾಲೊಂದನ್ನು ಸಲ್ಲಿಸಿರುವ ಮಣಿಪುರದ 9 ಮೈತೀ ಶಾಸಕರು ರಾಜ್ಯದ ಜನರು ಎನ್ ಬಿರೇನ್ ಸಿಂಗ್ ಸರಕಾರದಲ್ಲಿ ಸಂಪೂರ್ಣವಾಗಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಪೈಕಿ ಎಂಟು ಶಾಸಕರು ಬಿಜೆಪಿಗೆ ಸೇರಿದವರಾಗಿದ್ದಾರೆ.

    ಪರಿಸ್ಥಿತಿಯನ್ನು ನಿಯಂತ್ರಿಸಲು ಹಲವಾರು ಕ್ರಮಗಳ ಹೊರತಾಗಿಯೂ ತಳಮಟ್ಟದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ. ಸದ್ಯ ಸರಕಾರ ಮತ್ತು ಆಡಳಿತದಲ್ಲಿ ಯಾವುದೇ ನಂಬಿಕೆ ಉಳಿದಿಲ್ಲ ಸಾರ್ವಜನಿಕರು ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಸಂಪೂರ್ಣವಾಗಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಸರ್ಕಾರದಿಂದ ಸರಿಯಾದ ಆಡಳಿತಕ್ಕಾಗಿ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಾಸಕರ ಗುಂಪು ತನ್ನ ಅಹವಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ.

    ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಈಗ ಅಂತರ್ ಯುದ್ಧದ ರೂಪವನ್ನು ಪಡೆದುಕೊಂಡಿದ್ದು ಈವರೆಗೆ ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಸುಮಾರು 60 ಸಾವಿರ ಜನರು 350 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
    ಮಣಿಪುರದಲ್ಲಿ ಹಿಂಸಾಚಾರ ಹರಡಲು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ಒಡೆದು ಆಳುವ ರಾಜಕೀಯವು ಕಾರಣವಾಗಿದೆ ಎಂದು ವಿರೋಧಪಕ್ಷಗಳು ಅಹವಾಲಿನಲ್ಲಿ ಆರೋಪಿಸಿವೆ.

    ಇನ್ನೊಂದಡೆ ಮೈತೀ ಮತ್ತು ಕೂಕಿ ಬುಡಕಟ್ಟು ಸಮುದಾಯದ ನಡುವಣ ಹಿಂಸಾಚಾರ ಆರಂಭವಾಗಿ 50 ದಿನಗಳು ಪೂರೈಸಿದರೂ ಶಾಂತಿ ಸ್ಥಾಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
    ಮೋದಿಯವರು ಉದ್ದೇಶಪೂರ್ವಕವಾಗಿ ಹಿಂಸಾಚಾರದ ಬಗ್ಗೆ ಮಾತನಾಡದೇ ನಿರ್ಲಕ್ಷ ವಹಿಸಿದ್ದಾರೆ. ಮಣಿಪುರದ ಬಿಜೆಪಿ ರಾಜ್ಯ ಸರ್ಕಾರವು ಸಂಪೂರ್ಣ ಮೌನ ವಹಿಸಿದೆ. ಅಲ್ಲಿ ಗರಿಷ್ಠ ಮೌನ ಕನಿಷ್ಠ ಆಡಳಿತವಿದೆ ಎಂದು ಏಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟ್ವೀಟ್‌ ಮೂಲಕ ಆರೋಪಿಸಿದ್ದಾರೆ.

    LEAVE A REPLY

    Please enter your comment!
    Please enter your name here