ಮಂಗಳೂರು: ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯ ಬಿ ಹರೀಶ್ ಆಚಾರ್ಯ ಅವರು ತಮ್ಮ ಮನೆಯ ಮೆಟ್ಟಿಲಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜುಲೈ 8 ರಂದು ಲೋಕ ಅದಾಲತ್ ಗೆ ಆಗಮಿಸಿದ್ದ ಅವರು 1 ಲೀಟರ್ ನೀರಿನ ಬಾಟಲ್ ಖರೀದಿಸಿ ಮನೆಗೆ ಮರಳಿದ್ದರು. ಆ ಬಳಿಕ ಅವರನ್ನು ಯಾರೂ ಕಂಡಿರಲಿಲ್ಲ. ಸ್ನೇಹಿತರು ವಕೀಲರಿಗೆ ಎಷ್ಟು ಕರೆ ಮಾಡಿದರೂ ಪ್ರತಿಕ್ರಿಯೆ ಇರಲಿಲ್ಲ. ಹತ್ತಿರದ ಸ್ನೇಹಿತರು ಮತ್ತು ವಕೀಲರ ಜೊತೆಗೆ ಚಹಾ, ತಿಂಡಿ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದ ಹರೀಶ್ ಆಚಾರ್ಯ ಎಂದೂ ಈ ಪದ್ಧತಿಯನ್ನು ಮಿಸ್ ಮಾಡಿಕೊಂಡಿರಲಿಲ್ಲ. ಇದ್ದಕ್ಕಿದ್ದಂತೆ ಅವರು ಕಾಣೆಯಾಗಿರುವುದನ್ನು ಕಂಡ ವಕೀಲರು ತಮ್ಮ ಕಕ್ಷಿದಾರರನ್ನು ಮನೆಗೆ ಕಳುಹಿಸಿದ್ದು, ಕಾರು ನೋಡಿ ಅವರು ಮನೆಯಲ್ಲಿದ್ದಾರೆಂದು ತಿಳಿದುಕೊಂಡಿದ್ದರು.
ಪೊಲೀಸರ ಸಮ್ಮುಖದಲ್ಲಿ ಬಾಗಿಲು ಒಡೆದು ಒಳ ಹೋದಾಗ ಹರೀಶ್ ಆಚಾರ್ಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಟಿವಿ ಆನ್ ಆದ ಸ್ಥಿತಿಯಲ್ಲಿದ್ದು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಮೀಪದ ಸಂಬಂಧಿಗಳು ಶವ ಸಂಸ್ಕಾರಕ್ಕೆ ಮುಂದೆ ಬಾರದೆ ಇರುವುದರಿಂದ ಅವರ ಮೃತ ದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಯಾರು ಮುಂದೆ ಬರದಿದ್ದರೆ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಶವ ಸಂಸ್ಕಾರ ನಡೆಸಲು ವಕೀಲರು ನಿರ್ಧರಿಸಿದ್ದಾರೆ.
.