ಬಂಧನ ಮತ್ತು ಜೈಲುವಾಸ
ದಕ್ಷಿಣ ಆಫ್ರಿಕಾದಲ್ಲಿರುವಾಗ ಗಾಂಧಿಯವರಿಗೆ ಜೈಲುವಾಸದ ಅನುಭವವಾಗಿತ್ತು. ಭಾರತದಲ್ಲೂ ಅವರು ಹಲವಾರು ಬಾರಿ ಜೈಲುವಾಸ ಅನುಭವಿಸಿದರು. ಅವರು “ಯಂಗ್ ಇಂಡಿಯಾ” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಅದರಲ್ಲಿ ಅವರು ಬ್ರಿಟಿಷ್ ಸರ್ಕಾರದ ದೌರ್ಜನ್ಯಗಳನ್ನು ಖಂಡಿಸಿ ಬರೆಯುತ್ತಿದ್ದರು. ದೇಶ ಬಾಂಧವರು ಸರ್ಕಾರವನ್ನು ವಿರೋಧಿಸಿ ಸರ್ಕಾರದ ವಿರುದ್ದ ಶಾಂತಿಯುತ ಹೋರಾಟ ನಡೆಸಬೇಕೆಂದು ಕರೆ ಕೊಡುತ್ತಿದ್ದರು. ಸರ್ಕಾರದ ವಿರುದ್ಧ ಪ್ರಜೆಗಳನ್ನು ಪ್ರಚೋದಿಸಿ ಸರ್ಕಾರವನ್ನು ಉರುಳಿಸಲು ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಭಾರತದಲ್ಲಿ ಹಲವಾರು ಭಾರಿ ಬಂಧಿಸಲಾಗಿತ್ತು. ಈ ಆರೋಪದ ಮೇಲೆ ಅವರನ್ನು 1922ರಲ್ಲಿ ಅಹಮದಾಬಾದಿನಲ್ಲಿ ಬಂಧಿಸಲಾಯಿತು. ನ್ಯಾಯಾಲಯದಲ್ಲಿ ಅವರನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಗಾಂಧಿ ತಾವು ಮಾಡಿದ್ದಲ್ಲಿ ಯಾವ ತಪ್ಪೂ ಇಲ್ಲ ಎಂದು ವಾದಿಸಿದರು. ತಮಗೆ ಯಾವ ಶಿಕ್ಷೆಯನ್ನಾದರೂ ಕೊಡಬಹುದೆಂದು ಹೇಳಿದರು. ಅವರಿಗೆ 6 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ನೀಡಲಾಯಿತು. ಈ ಮಧ್ಯೆ ಅವರಿಗೆ ಅಪೆಂಡಿಸೈಟಿಸ್ ಕಾಯಿಲೆ ಬಂತು. ಶಸ್ತ್ರ ಚಿಕಿತ್ಸೆಗಾಗಿ ಅವರನ್ನು 1924ರಲ್ಲಿ ಬಿಡುಗಡೆ ಮಾಡಲಾಯಿತು.