ಮಂಗಳೂರು(ಪುಣೆ): ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಗಾದೆ ಮಾತು ಸುಳ್ಳಾಗುವಂತೆ ಇಲ್ಲೊಂದು ಘಟನೆ ನಡೆದಿದೆ. ಹುಟ್ಟುಹಬ್ಬವನ್ನು ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲ ಮತ್ತು ವಾರ್ಷಿಕೋತ್ಸವದಂದು ದುಬಾರಿ ಉಡುಗೊರೆಗಳನ್ನು ನೀಡದ ಕಾರಣಕ್ಕೆ ಪತ್ನಿ ನೀಡಿದ ಪಂಚ್ ಗೆ ಪತಿ ಪ್ರಾಣ ಕಳೆದುಕೊಂಡ ಘಟನೆ ಪುಣೆಯ ವನವಡಿಯಲ್ಲಿ ನಡೆದಿದೆ.
ಪುಣೆಯ ವನವಡಿ ಪ್ರದೇಶದ ಪಾಶ್ ರೆಸಿಡೆನ್ಶಿಯಲ್ ಸೊಸೈಟಿಯ ಅಪಾರ್ಟ್ಮೆಂಟ್ನಲ್ಲಿ ವಾಸವಿರುವ ಕಟ್ಟಡ ನಿರ್ಮಾಣ ಕ್ಷೇತ್ರದ ಉದ್ಯಮಿ 36 ವರ್ಷದ ನಿಖಿಲ್ ಖನ್ನಾ, ರೇಣುಕಾ (38) ಎಂಬವರನ್ನು 6 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಹೆಂಡತಿಯ ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಕರೆದುಕೊಂಡು ಹೋಗಲು ನಿರಾಕರಿಸಿದ ಕಾರಣಕ್ಕೆ ಪತ್ನಿ ರೇಣುಕಾ ಪತಿ ನಿಖಿಲ್ ಮೂಗಿಗೆ ಗುದ್ದಿದ್ದರಿಂದ ಆತ ಸಾವನ್ನಪ್ಪಿದ್ದಾರೆ. ಗುದ್ದಿದ ಪರಿಣಾಮ ನಿಖಿಲ್ನ ಮೂಗು ಮತ್ತು ಕೆಲವು ಹಲ್ಲುಗಳು ಮುರಿದುಹೋಗಿವೆ, ಭಾರೀ ರಕ್ತಸ್ರಾವದಿಂದ ನಿಖಿಲ್ ಪ್ರಜ್ಞೆ ಕಳೆದುಕೊಂಡಿದ್ದರು. ನಿಖಿಲ್ ಅವರನ್ನು ತಕ್ಷಣವೇ ಸಾಸೂನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ನಿಖಿಲ್ ದಂಪತಿಗಳು ಜಗಳವಾಡಿದ್ದಾರೆ. ವಾಗ್ವಾದದ ಸಮಯದಲ್ಲಿ, ರೇಣುಕಾ ನಿಖಿಲ್ನ ಮುಖಕ್ಕೆ ಬಲವಂತವಾಗಿ ಮೊಂಡಾದ ವಸ್ತುವಿನಿಂದ ಪಂಚ್ ನೀಡಿದ್ದಾಳೆ, ಇದರ ಪರಿಣಾಮವಾಗಿ ಮೂಗು ಮುರಿದು ಹಲವಾರು ಹಲ್ಲುಗಳು ಮುರಿದಿದೆ ಎಂದು ಶಂಕಿಸಿದ್ದಾರೆ. ಮಾತ್ರವಲ್ಲದೆ ಘಟನೆ ನಡೆದ ಸಂದರ್ಭದಲ್ಲಿ ಆಕೆ ಕುಡಿದಿರುವ ಸಾಧ್ಯತೆಯು ಇದೆ ಎಂಬ ಸಂಶಯ ವ್ಯಕ್ತವಾಗಿದೆ. ರೇಣುಕಾ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.