ಮಂಗಳೂರು/ಪುತ್ತೂರು: ದೈವಾರಾಧನೆಯ ಮಹತ್ವ ಸಾರುವ ತುಳುನಾಡಿನ ದೈವದ ಮಹಿಮೆಯ ತಿಳಿಸುವ ‘ಧರ್ಮದೈವ’ ಚಿತ್ರವು ಕರಾವಳಿಯಾದ್ಯಂತ ಜು. 5ರಂದು ತೆರೆ ಕಂಡಿತು.
ಪುತ್ತೂರಿನಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರದರ್ಶನ ಆರಂಭಗೊಂಡಿತು. ಅದಕ್ಕೂ ಮುನ್ನ ಪ್ರಗತಿಪರ ಕೃಷಿಕ ಕಡಮಜಲು ಸುಭಾಸ್ ರೈ ದೀಪ ಬೆಳಗಿಸಿ ಸಿನಿಮಾಗೆ ವಿಧ್ಯುಕ್ತ ಚಾಲನೆ ನೀಡಿ ಶುಭ ಹಾರೈಸಿದರು. ಈ ವೇಳೆ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸುಧಾನ ವಸತಿ ಶಾಲೆಯ ಸಂಚಾಲಕ ರೆ.ಫಾ. ವಿಜಯ ಹಾರ್ವಿನ್, ಅಕ್ಷಯ ಗ್ರೂಪ್ ಆಡಳಿತ ನಿರ್ದೇಶಕ ಜಯಂತ ನಡುಬೈಲು, ಪ್ರಮುಖರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ವಿದುಷಿ ನಯನಾ ವಿ. ರೈ, ನಾರಾಯಣ ರೈ ಬಾರಿಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.
ಪ್ರಸಾದ್ ಕೆ. ಶೆಟ್ಟಿ, ಚಿತ್ರದ ಸಂಭಾಷಣೆ ಬರೆದಿರುವ ಹಮೀದ್ ಪುತ್ತೂರು, ಚಿತ್ರದ ನಟಿ ದೀಕ್ಷಾ ಡಿ. ರೈ, ಶಿವಪ್ರಸಾದ್, ಸಂಕಲನಕಾರ ರಾಧೇಶ್ ರೈ, ಕೌಶಿಕ್ ರೈ ಕುಂಜಾಡಿ, ಪ್ರಗತಿ ಸ್ಟಡಿ ಸೆಂಟರ್ ನ ಗೋಕುಲ್‌ನಾಥ್ ಪಿ.ವಿ., ಚಿತ್ರದ ಛಾಯಾಗ್ರಾಹಕ ನಾಗೇಶ್ ಭೂಮಿ, ದೀಕ್ಷಿತ್ ಸೊರಕೆ, ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಮಳಿಗೆಯ ಮ್ಯಾನೇಜರ್ ರತೀಶ್ ಮತ್ತಿತರರು ಉಪಸ್ಥಿತರಿದ್ದರು. ಚಲನಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಗಾಯಕ ಪದ್ಮರಾಜ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ನಮ್ಮ ನಡುವೆ ನಡೆಯುವ, ನಡೆಯುತ್ತಿರುವ, ನಡೆಯಬಹುದಾದ ನವಿರಾದ ಕೌಟುಂಬಿಕ ಕಥೆಯನ್ನು ಹೊಂದಿರುವ ಚಿತ್ರಕ್ಕೆ ಪ್ರೇಕ್ಷಕರು ತಲೆದೂಗಿದ್ದು ಬಾಕ್ಸಾಫೀಸಿನಲ್ಲಿ ಗೆಲ್ಲುವ ಎಲ್ಲಾ ಸೂಚನೆಯನ್ನು ನೀಡಿದೆ.