ಪೊಲೀಸ್‌ ಸಿಬ್ಬಂದಿಯೊಬ್ಬರಿಂದ ಲಂಚ ಪಡೆದ ಆರೋಪ – ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ ಮಹಮ್ಮದ್ ಆರೀಸ್ ಬಂಧನ

ಮಂಗಳೂರು/ಮುಡಿಪು: ಕಿರಿಯ ಪೊಲೀಸ್‌ ಸಿಬ್ಬಂದಿಯೊಬ್ಬರಿಂದ ಲಂಚ ಪಡೆದ ಹಿನ್ನಲೆಯಲ್ಲಿ ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್‌ನ ಪೊಲೀಸ್ ಇನ್‌ಸ್ಪೆಕ್ಟರ್ ಮಹಮ್ಮದ್ ಆರೀಸ್ ಅವರನ್ನು ಲೋಕಾಯುಕ್ತ ಪೊಲೀಸರು ಸಾಕ್ಷ್ಯ ಸಮೇತ ಬುಧವಾರ(ಜು.10) ಬಂಧಿಸಿದ್ದಾರೆ.

ಅತಿಥಿ ಗೃಹದಲ್ಲಿ ಕರ್ತವ್ಯ ನಿಯೋಜನೆ ಗೊತ್ತುಪಡಿಸಲು ಅಧೀನ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್‌ ಒಬ್ಬರ ಬಳಿ ಮೊಹಮ್ಮದ್ ಆರೀಸ್ ರೂ.20 ಸಾವಿರ ಹಣ ಹಾಗೂ ಪ್ರತಿ ತಿಂಗಳು ರೂ.6 ಸಾವಿರ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಕಾನ್‌ಸ್ಟೆಬಲ್‌ನಿಂದ ಕೆಎಸ್‌ಆರ್‌ಪಿ ಇನ್‌ಸ್ಪೆಕ್ಟರ್‌ ಇದುವರೆಗೆ ರೂ.50 ಸಾವಿರದಷ್ಟು ಲಂಚವನ್ನು ಪಡೆದಿದ್ದರು. ಕಾನ್‌ಸ್ಟೆಬಲ್‌ ಅವರ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ  ಮೂರು ತಿಂಗಳಿನಿಂದ ಲಂಚದ ಹಣವನ್ನು ನೀಡಿರಲಿಲ್ಲ. ಬಾಕಿ ಹಣವನ್ನು ನೀಡದಿದ್ದರೆ ಡ್ಯೂಟಿಯನ್ನು ಬದಲಾಯಿಸುತ್ತೇನೆ ಎಂದು ಮೊಹಮ್ಮದ್ ಆರಿಸ್‌ ತಿಳಿಸಿದ್ದರು. ಈ ಬಗ್ಗೆ ಕಾನ್‌ಸ್ಟೆಬಲ್‌ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ರೂ.18 ಸಾವಿರ ಲಂಚದ ಹಣವನ್ನು ಮೊಹಮ್ಮದ್ ಆರೀಸ್ ಬುಧವಾರ ಪಡೆದಿದ್ದು ಆಗ ಅವರನ್ನು ಬಂಧಿಸಲಾಯಿತು ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ಪಿ. ನಟರಾಜ್ ತಿಳಿಸಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಗಾನ ಪಿ.ಕುಮಾರ್, ಚೆಲುವರಾಜ್ ಬಿ., ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಅಮಾನುಲ್ಲಾ.ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಸಿ.ಎಲ್ ಅವರು ಸಿಬ್ಬಂದಿ ಜೊತೆ ಕಾರ್ಯಾಚರಣೆ ಕೈಗೊಂಡಿದ್ದರು.

LEAVE A REPLY

Please enter your comment!
Please enter your name here