ಮಂಗಳೂರು: ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗಾಂಧೀಜಿಯವರ ಅಹಿಂಸಾ ಮಾರ್ಗದ ಸ್ವಾತಂತ್ರ್ಯ ಹೋರಾಟವನ್ನು ಅಪಮಾನಿಸಿದ್ದು, ದೇಶದ್ರೋಹಗೈದಂತೆ. ಅವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಬೇಕು. ಸುಮೋಟೊ ಕೇಸು ದಾಖಲಿಸಬೇಕೆಂದು ಮಾಜಿ ಸಚಿವ ರಮಾನಾಥ ರೈ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ದೊರಕಿದ್ದಲ್ಲ. ಚರಕದಿಂದ ಮಾತ್ರ ಸ್ವಾತಂತ್ರ್ಯ ಬಂದದ್ದಲ್ಲ ಎಂದು ಹರೀಶ್ ಪೂಂಜಾ ಹೇಳಿದ್ದಾರೆ. ಪ್ರಧಾನಿ ಮೋದಿಯವರು ವಿದೇಶದಿಂದ ಬರುವ ಗಣ್ಯರಿಗೆ ಚರಕವನ್ನು ತೋರಿಸಿ ಹೆಗ್ಗಳಿಕೆಯ ಮಾತುಗಳನ್ನು ಆಡುತ್ತಾರೆ. ಆದರೆ ಅವರ ಶಿಷ್ಯರು ಗಾಂಧೀಜಿಯವರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಾರೆ. ದ.ಕ.ಜಿಲ್ಲೆ ಮತೀಯ ಸೂಕ್ಷ್ಮ ಜಿಲ್ಲೆ. ಕೆಲವೊಂದು ಸಂದರ್ಭದಲ್ಲಿ ಇಲ್ಲಿ ಅವರವರ ಲಾಭಕ್ಕೆ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡಲಾಗುತ್ತದೆ. ಅದು ಆಗಬಾರದು. ಸರಕಾರ ಕೂಡಾ ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಆದ್ದರಿಂದ ಜಿಲ್ಲೆಯಲ್ಲಿ ಮತೀಯ ಸಾಮರಸ್ಯ ಕೆಡದ ರೀತಿಯಲ್ಲಿ ಕಾಪಾಡಬೇಕಿದೆ ಎಂದು ರಮಾನಾಥ ರೈ ಹೇಳಿದ್ದಾರೆ.