ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು- ನೋಟೀಸ್‌ ಜಾರಿಗೊಳಿಸಿದ ಲೋಕಾಯುಕ್ತ

ಮಂಗಳೂರು : ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್‌ ಶಶಿಕುಮಾರ್ ಗೆ ಲೋಕಾಯುಕ್ತ ನೋಟಿಸ್ ಜಾರಿಗೊಳಿಸಿದೆ. ಫೆ.14ರೊಳಗೆ ತನಿಖಾ ವರದಿ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ನೋಟೀಸ್‌ನಲ್ಲಿ ತಿಳಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಉಳ್ಳಾಲದ ಮೊಹಮ್ಮದ್ ಕಬೀರ್ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ದೂರಿನಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್, ಎಸ್.ಐ ಪ್ರದೀಪ್ ವಿರುದ್ದ ಕಬೀರ್ ಭಾರೀ ಭ್ರಷ್ಟಾಚಾರ ಆರೋಪ ಮಾಡಲಾಗಿದ್ದು ಠಾಣೆಯಲ್ಲಿ ಹಣ ವಸೂಲು ಮಾಡಲು ಹಮೀದ್ ಎಂಬ ಬ್ರೋಕರ್ ಇಟ್ಟುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಮಾತ್ರವಲ್ಲದೆ ಗಾಂಜಾ ಮಾಫಿಯ, ಮರಳು ಮಾಫಿಯ, ಹೊಟೇಲ್ ಮಾಲೀಕರಿಂದ ಹಣಕ್ಕೆ ಬೇಡಿಕೆ ಇಡುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದ್ದು ಇಬ್ಬರು ಅಧಿಕಾರಿಗಳು ಉಳ್ಳಾಲಕ್ಕೆ ಬಂದ ಬಳಿಕ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿರುವುದಾಗಿ ಹೇಳಲಾಗಿದೆ. ಅಲ್ಲದೇ ಮಂಗಳೂರು ನಗರ ಪೊಲೀಸ್ ಕಮೀಷನರ್‌ ಎನ್. ಶಶಿಕುಮಾರ್ ವಿರುದ್ದವೂ ದೂರಿನಲ್ಲಿ ಉಲ್ಲೇಖಿಸಲಾಗಿದ್ದು ಅಧಿಕಾರ ದುರುಪಯೋಗ ಮತ್ತು ಲಂಚದ ಆಪಾದನೆ ಹಿನ್ನೆಲೆ ಕರ್ನಾಟಕ ಲೋಕಾಯುಕ್ತ ಕಲಂ.9 ರಡಿಯಲ್ಲಿ ತನಿಖೆ ನಡೆಸುವುದು ಸೂಕ್ತ ಎಂದು ಕರ್ನಾಟಕ ಲೋಕಾಯುಕ್ತ ನೋಟೀಸ್ ಜಾರಿಗೊಳಿಸಿದೆ. ಫೆ.14 ರ ಒಳಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಪೊಲೀಸ್ ಕಮೀಷನರ್ ಶಶಿಕುಮಾರ್ ಗೆ ಲೋಕಾಯುಕ್ತ ನೋಟೀಸ್ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here