ದ.ಕ ಲೋಕಸಭಾ ಕ್ಷೇತ್ರ-ಚುನಾವಣೆಗೆ ಸಂಪೂರ್ಣ ಸಜ್ಜು-ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮಾಹಿತಿ

ಮಂಗಳೂರು: ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಎ.26ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ವರೆಗೆ ಲೋಕಸಭಾ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ.

8,87,122 ಪುರುಷ ಮತ್ತು 9,30,928 ಮಹಿಳಾ ಮತದಾರರು ಸೇರಿ 18,18,127 ಮಂದಿ ಅರ್ಹ ಮತದಾರರು ಜಿಲ್ಲೆಯ 1876 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1,876 ಮತಗಟ್ಟೆಗಳ ಪೈಕಿ ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ 72 ಮತ್ತು ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 105 ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣೆ ಸಾಂಗವಾಗಿ ನೆರವೇರುವ ಉದ್ದೇಶದಿಂದ ಒಟ್ಟು 11,255 ಸಿಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿಯ ಪೈಕಿ ಶೇ. 70ರಷ್ಟು ಮಹಿಳೆಯರಿದ್ದಾರೆ. ಅವರನ್ನು ಸ್ವ ಕ್ಷೇತ್ರದ ಮತಗಟ್ಟೆಯಲ್ಲೇ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಎ. 24ರಂದು ಸಂಜೆ 6 ಗಂಟೆಗೆ ಮುನ್ನ ಎಲ್ಲಾ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು. ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಇರುವಂತಿಲ್ಲ. ಮತದಾನದ ದಿನದಂದು ಮತದಾನ ಮಾಡಲು ಅನುಕೂಲವಾಗುಂತೆ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಸಹಿತ ಕಡ್ಡಾಯ ರಜೆ ನೀಡಬೇಕು ಎಂದರು. ಕರ್ತವ್ಯ ನಿರತ 1,052 ಸರಕಾರಿ ನೌಕರರು ಮತ ಚಲಾಯಿಸಿದ್ದಾರೆ. 85 ವರ್ಷ ಮೇಲ್ಪಟ್ಟ 5,878 ಮತ್ತು 1,929 ಮಂದಿ ಅಂಗವಿಕಲ ಮತದಾರರು ಮತ್ತು ಅಗತ್ಯ ಸೇವೆ ಎಂದು ಗುರುತಿಸಲಾದ ಇಲಾಖಾ ಅಧಿಕಾರಿಗಳ ಪೈಕಿ 100 ಮಂದಿ ಈಗಾಗಲೇ ಮತ ಚಲಾವಣೆ ಮಾಡಿದ್ದಾರೆ ಎಂದರು. 17,72,641 ಮಂದಿ ಮತದಾರರಿಗೆ ಓಟರ್ ಸ್ಲಿಪ್‌ ಹಂಚಿಕೆ ಮಾಡಲಾಗಿದೆ. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಮತದಾರರಿಗೆ ಇದೇ ಮೊದಲ ಬಾರಿಗೆ ಓಟರ್‌ ಸ್ಲಿಪ್‌ನಲ್ಲಿ ಕ್ಯುಆರ್‌ ಕೋಡ್‌ ವ್ಯವಸ್ಥೆ ಮಾಡಲಾಗಿದ್ದು, ಸ್ಕ್ಯಾನ್ ಮಾಡುವ ಮೂಲಕ ಮತದಾನ ಕೇಂದ್ರದ ಮಾಹಿತಿ ಪಡೆಯಬಹುದಾಗಿದೆ ಎಂದರು. ಜಿಲ್ಲೆಯಲ್ಲಿ ಒಟ್ಟು 72 ಮತಗಟ್ಟೆ ಗಳನ್ನು ಮಾದರಿ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಇದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5ರಂತೆ ಸಖೀ ಬೂತ್‌, ಅಂಗವಿಕಲ, ಯುವ ಮತದಾರರ, ಧ್ಯೇಯ ಆಧಾರಿತ ಮತ್ತು ಸಾಂಪ್ರದಾಯಿಕ ತಲಾ 1 ಬೂತ್‌ ಇರಲಿದೆ. ಸಖೀ ಮತಗಟ್ಟೆಯಲ್ಲಿ ಸಂಪೂರ್ಣ ಮಹಿಳಾ ಸಿಬಂದಿಯೇ ಇರುವರು. 938 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ನಡೆಯಲಿದೆ ಎಂದರು.

ಚುನಾವಣಾ ಕಾರ್ಯಕ್ಕೆ ಉಪಯೋಗಿಸುವ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು 2,334 ಬ್ಯಾಲೆಟ್‌ ಯುನಿಟ್‌ ಅಲ್ಲದೆ ಹೆಚ್ಚುವರಿಯಾಗಿ 458 ಮೀಸಲು ಇಟ್ಟು ಕೊಳ್ಳಲಾಗಿದೆ. 2,359 ಕಂಟ್ರೋಲ್‌ ಯುನಿಟ್‌ 483 ಹೆಚ್ಚುವರಿ, 2,484 ವಿವಿ ಪ್ಯಾಟ್‌ ಮತ್ತು 608 ಹೆಚ್ಚುವರಿಯಾಗಿ ಇಟ್ಟುಕೊಳ್ಳಲಾಗಿದೆ. ಹೆಚ್ಚುವರಿ ಯಂತ್ರಗಳು ಜಿಪಿಎಸ್‌ ಹೊಂದಿರುವ ವಾಹನಗಳಲ್ಲಿ ಸಿಎಪಿಎಫ್‌ ಸಿಬಂದಿಯೊಂದಿಗೆ ಸೆಕ್ಟರ್‌ ಅಧಿಕಾರಿಯ ಸುಪರ್ದಿಯಲ್ಲಿರಲಿದೆ ಎಂದು ವಿವರಿಸಿದರು.‌

ಬೆಳ್ತಂಗಡಿ-ಎಸ್‌ಡಿಎಂ ಪಪೂ ಕಾಲೇಜು ಉಜಿರೆ, ಮೂಡುಬಿದಿರೆ- ಮಹಾವೀರ ಪ್ರ.ದ. ಕಾಲೇಜು ಮೂಡುಬಿದಿರೆ, ಮಂಗಳೂರು ನಗರ ಉತ್ತರ- ಸಂತ ಅಲೋಶಿಯಸ್‌ ಪಪೂ ಕಾಲೇಜು ಕೊಡಿಯಾಲಬೈಲು, ಮಂಗಳೂರು ನಗರ ದಕ್ಷಿಣ – ಕೆನರಾ ಹೈಸ್ಕೂಲ್‌ ಉರ್ವ, ಲಾಲ್‌ಬಾಗ್‌, ಮಂಗಳೂರು-ಮಂಗಳೂರು ವಿವಿ ಹ್ಯಮಾನಿಟೀಸ್‌ ವಿಭಾಗ ಕೊಣಾಜೆ, ಬಂಟ್ವಾಳ- ಇನ್ಫೆಂಟ್ ಜೀಸಸ್‌ ಆಂಗ್ಲ- ಕನ್ನಡ ಮಾಧ್ಯಮ ಶಾಲೆ ಮೊಡಂಕಾಪು, ಪುತ್ತೂರು- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಸುಳ್ಯ-ನೆಹರೂ ಮೆಮೋರಿಯಲ್‌ ಕಾಲೇಜು ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಡಿ-ಮಸ್ಟರಿಂಗ್‌ ಕಾರ್ಯ ಮುಕ್ತಾಯ ವಾದ ಬಳಿಕ ಕೇಂದ್ರಗಳಿಂದ ಇವಿಎಂ, ವಿವಿಪ್ಯಾಟ್‌ ಮತ್ತು ದಾಖಲೆಗಳನ್ನು ಮತ ಎಣಿಕೆ ಕೇಂದ್ರವಾದ ಎನ್‌ಐಟಿಕೆ ಸುರತ್ಕಲ್‌ನಲ್ಲಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ.

ಜಿ.ಪಂ. ಸಿಇಒ ಡಾ| ಆನಂದ್‌, ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌, ದ.ಕ. ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಹಾಗೂ ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here