ಮತದಾರರ ಪಟ್ಟಿಯಲ್ಲಿ ಅಕ್ರಮ ಡಿಲೀಟ್‌ – ಚುನಾವಣಾಧಿಕಾರಿಗೆ ಪ್ರಿಯಾಂಕ್‌ ದೂರು

ಬೆಂಗಳೂರು: ರಾಜ್ಯ ಸರಕಾರ ‘ಚಿಲುಮೆ’ ಸಂಸ್ಥೆ ಮೂಲಕ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಿದ ಬಳಿಕ ಈಗ ರಾಜ್ಯದ ಬೇರೆ ಕ್ಷೇತ್ರಗಳಲ್ಲಿಯೂ ಅಕ್ರಮಕ್ಕೆ ಮುಂದಾಗಿದ್ದು, ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಫೆ.20ರಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆನ್‍ಲೈನ್ ಮೂಲಕ 6,670 ಮತದಾರರ ಹೆಸರನ್ನು ಅವರಿಗೆ ಗೊತ್ತಿಲ್ಲದೆ ಮತದಾರರ ಪಟ್ಟಿಯಿಂದ ಹೆಸರು ರದ್ದುಪಡಿಸುವಂತೆ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ. ಈ ವಿಚಾರವಾಗಿ ಪಕ್ಷದ ಬೂತ್ ಏಜೆಂಟ್ ಪರಿಶೀಲಿಸಿದಾಗ, ಅರ್ಜಿಯಲ್ಲಿ ‘ನಾನು ಸ್ಥಳೀಯನಲ್ಲ, ನನ್ನ ನಿವಾಸ ಬೇರೆ ರಾಜ್ಯದಲ್ಲಿದೆ’ ಎಂದು ಹೇಳಿರುವುದು ಸ್ಪಷ್ಟವಾಗಿದೆ. ಆ ಮೂಲಕ ವ್ಯವಸ್ಥಿತವಾಗಿ, ಅಕ್ರಮವಾಗಿ ಮತದಾರರ ಹೆಸರು ಕೈ ಬಿಡಲು ಷಡ್ಯಂತ್ರ ರೂಪಿಸಲಾಗಿದೆ ಎಂದವರು ದೂರಿದ್ದಾರೆ. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ದೂರುಗಳನ್ನು ನೀಡಲಾಗಿದೆ. ಕಾನೂನಿನ ಪ್ರಕಾರ ಒಂದು ಮೊಬೈಲ್ ಸಂಖ್ಯೆಯಿಂದ ಗರಿಷ್ಠ ಐದು ಮಂದಿಯ ಹೆಸರು ಕೈಬಿಡಲು ಅರ್ಜಿ ಹಾಕಬಹುದು. ಆದರೆ, ಆಳಂದದಲ್ಲಿ ಒಂದು ಮೊಬೈಲ್ ಸಂಖ್ಯೆಯಲ್ಲಿ 70 ಮತದಾರರ ಹೆಸರು ರದ್ದುಪಡಿಸಲು ಅರ್ಜಿ ಹಾಕಲಾಗಿದೆ. ಒಬ್ಬೊಬ್ಬರು 50-70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲು ಹೇಗೆ ಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೇ ಯಾರು ಮತ ಹಾಕುತ್ತಾರೆ ಎಂದು ಬೇರೆ ರಾಜ್ಯದವರಿಗೆ ಮಾಹಿತಿ ನೀಡುವವರು ಯಾರು. ಈ ಮಾಹಿತಿ, ಆ ಸ್ಥಳೀಯ ಬೂತ್‍ನವರಿಗೆ ಗೊತ್ತಿರುತ್ತದೆಯೇ ಹೊರತು ಬೇರೆಯವರಿಂದ ಈ ಕೆಲಸ ಅಸಾಧ್ಯ. ಕಾಂಗ್ರೆಸ್ ಮತದಾರರ ಪಟ್ಟಿ ಕಲೆ ಹಾಕಲು ಬಿಜೆಪಿ ಕೆಲವರನ್ನು ನೇಮಿಸಿದಂತಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here