ಪ್ರತಿ ಕ್ಷೇತ್ರದಲ್ಲೂ ಓರ್ವ ಬಂಟ ಅಭ್ಯರ್ಥಿ ಕಣಕ್ಕೆ- ಐಕಳ ಹರೀಶ್‌ ಶೆಟ್ಟಿ ಎಚ್ಚರಿಕೆ

ಮಂಗಳೂರು: ಬಂಟ ಸಮಾಜಕ್ಕೆ ನಿಗಮ ಮತ್ತು 3ಬಿ ಯಿಂದ 2ಎ ಗೆ ಮೀಸಲಾತಿಯನ್ನು ವರ್ಗಾಯಿಸಬೇಕು  ಎನ್ನುವ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಬೇಡಿಕೆ ಈಡೇರದಿದ್ದರೆ ರಸ್ತೆಗಿಳಿಯದೆ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಎಚ್ಚರಿಸಿದ್ದಾರೆ.

ಪತ್ರಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಂಟ ಸಮುದಾಯ ಮೇಲ್ನೋಟಕ್ಕೆ ಅತ್ಯಂತ ಶ್ರೀಮಂತ ಸಮುದಾಯವಾಗಿ  ಕಂಡು ಬಂದರೂ, ಶೇಕಡ 25ರಷ್ಟು ಮಂದಿ ಮಧ್ಯಮ ಮತ್ತು ಬಡತನದ ರೇಖೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ 5 ಜನ ಬಂಟ ಶಾಸಕರಿದ್ದರೂ ಸಮುದಾಯಕ್ಕೆ ಯಾವುದೇ ಸಹಾಯವಾಗಿಲ್ಲ. ಅವರೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕಿತ್ತು, ನಮ್ಮ ನಾಯಕರನ್ನು ಬಂಟ ಸಮಾಜ ಈ ಬಗ್ಗೆ ಪ್ರಶ್ನಿಸುತ್ತಿದೆ.  ಬಿಲ್ಲವರಿಗೆ ನಿಗಮ ಆಗಿದ್ದು ಸಂತೋಷದ ವಿಚಾರ , ಅವರಿಗೆ  ಶಾಸಕರು, ಸಚಿವರು ಬೆಂಬಲ ನೀಡಿದ್ದಾರೆ. ಆದರೆ ನಮ್ಮವರು ಏನು ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದ ಅವರು ವಿಶ್ವದಾದ್ಯಂತ ಇರುವ ಬಂಟರನ್ನು ಕರೆಸಿ ಪ್ರತೀ ಕ್ಷೇತ್ರದಲ್ಲೂ ಓರ್ವ ಬಂಟ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಐದು ಸಾವಿರ ಮತ ಪಡೆದರೂ ಗೆಲ್ಲುವ ಅಭ್ಯರ್ಥಿಯನ್ನು ಸೋಲಿಸುವ ಸಾಮರ್ಥ್ಯ ನಮಗಿದೆ ಎಂದು ಎಚ್ಚರಿಸಿದರು. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಂಟರು ಮತ್ತು ಬ್ರಾಹ್ಮಣರಿಗೂ ನಿಗಮಸ ಬರವಸೆ ನೀಡಿದೆ. ಅದಕ್ಕಿಂತ ಮೊದಲು ಸರಕಾರ ಬಂಟರ ಬೇಡಿಕೆಯನ್ನು ಈಡೇರಿಸಬೇಕು  ಎಂದು ಆಗ್ರಹಿಸಿದರು. ಇದುವರೆಗೂ ನಾವು ಹೋರಾಟ ಮಾಡಿಲ್ಲ, ಇದರರ್ಥ ನಮಗೆ ಶಕ್ತಿ ಇಲ್ಲ ಎಂದಲ್ಲ ಎಂದು ಅವರು ಹೇಳಲು ಮರೆಯಲಿಲ್ಲ. ಈಗಿನ ಸರಕಾರ ಬೇಡಿಕೆಯನ್ನು ಈಡೇರಿಸದಿದ್ದರೆ ಬಂಟ ಸಮುದಾಯದ ಪ್ರತಿನಿಧಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ  ಐಕಳ ಹರೀಶ್‌ ಶೆಟ್ಟಿ ಸಮುದಾಯವನ್ನು ಬೆಂಬಲಿಸುವವರಿಗೆ ನಾವು ಬೆಂಬಲ ನೀಡುತ್ತೇವೆ. ಆಗ ನಮ್ಮ ಬೇಡಿಕೆ ಈಡೇರಿಸದ ಬಗ್ಗೆ ಈಗಿನ ಶಾಸಕರಿಗೆ ಪಶ್ಚಾತಾಪ ಆಗಬಹುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here