ರಾಜ್ಯದ 865 ಗ್ರಾಮಗಳಲ್ಲಿ ಮಹಾರಾಷ್ಟ್ರದ ಯೋಜನೆ ಜಾರಿ-ಸಿಎಂ ರಾಜಿನಾಮೆಗೆ ಆಗ್ರಹಿಸಿದ ಡಿಕೆಶಿ

ಬೆಂಗಳೂರು: ಮಹಾರಾಷ್ಟ್ರ ಬಿಜೆಪಿ ಸರ್ಕಾರ ಗಡಿಭಾಗದ ಕರ್ನಾಟಕದ 865 ಗ್ರಾಮಗಳಲ್ಲಿ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿದ್ದು, ಆಮೂಲಕ ಕರ್ನಾಟಕ ರಾಜ್ಯಕ್ಕೆ ಅವಮಾನ ಮಾಡಿದೆ. ನಮ್ಮ ಪ್ರಾಣ ಹೋದರೂ ಸರಿ ನಮ್ಮ ನೆಲ, ಜಲ, ಭಾಷೆ ರಕ್ಷಣೆ ಮಾಡಿಕೊಳ್ಳುತ್ತೇವೆ. ನಾವು ಗಡಿ ಭಾಗದ ಒಂದೇ ಒಂದು ಇಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಅವರ ಯೋಜನೆ ನಮ್ಮ ನೆಲದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ನಮ್ಮ ನೆಲದಲ್ಲಿ, ನಮ್ಮ ಜನರ ಆರೋಗ್ಯ ರಕ್ಷಿಸಲು ನಮಗೆ ತಾಕತ್ತು ಇಲ್ಲವೇ? ನಮ್ಮ ನೆಲದಲ್ಲಿ ಯೋಜನೆ ಜಾರಿ ಮಾಡಲು ಮಹಾರಾಷ್ಟ್ರ ಸರಕಾರಕ್ಕೆ ಅನುಮತಿ ಕೊಟ್ಟವರು ಯಾರು? ನಮಗೇಕೆ ಬೇಕು ಅವರ ಭಿಕ್ಷೆ. ನಮ್ಮ ಜನರ ಅರೋಗ್ಯ ರಕ್ಷಣೆ ಮಾಡಲು ರಾಜ್ಯ ಬಿಜೆಪಿ ಸರಕಾರದ ಬಳಿ ಹಣ ಇಲ್ಲವೇ? ಈ ಸರಕಾರವೇನಾದರೂ ದಿವಾಳಿ ಆಗಿದೆಯೇ? ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರ ರಾಜಕೀಯ ಕಾರಣಗಳಿಗೆ ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಮುಂದಾಗಿದೆ. ಕನ್ನಡಿಗರ ಸ್ವಾಭಿಮಾನ, ಮರ್ಯಾದೆ ಹರಾಜು ಹಾಕುತ್ತಿದೆ. ಇದರ ವಿರುದ್ಧ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಚಿತ್ರರಂಗದವರು, ಕಲಾವಿದರು, ಬುದ್ಧಿಜೀವಿಗಳು ಧ್ವನಿ ಎತ್ತಬೇಕು ಎಂದು ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ಮ್ಮ ನೆಲದಲ್ಲಿ ಮಹಾರಾಷ್ಟ್ರ ಸರ್ಕಾರ ಯೋಜನೆ ಜಾರಿಗೆ ಮುಂದಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣ್ಣುಮುಚ್ಚಿ ಕುಳಿತಿರುವುದು ಈ ಬಿಜೆಪಿ ಸರ್ಕಾರದ ದೌರ್ಬಲ್ಯಕ್ಕೆ ಸಾಕ್ಷಿ. ಮೊದಲಿಂದಲೂ ಬಿಜೆಪಿ ಸರಕಾರ ಇಂತಹ ಮರ್ಯಾದೆಗೇಡಿ ನಡೆಯನ್ನೇ ಮುಂದುವರಿಸಿಕೊಂಡು ಬಂದಿದೆ. ಕನ್ನಡಿಗರನ್ನು ಅವಮಾನಿಸುತ್ತಿದೆ ಎಂದು ಡಿಕೆಶಿ ಕಿಡಿಕಾರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನಮ್ಮ ನೆಲದಲ್ಲಿ ಮಹರಾಷ್ಟ್ರ ಸರಕಾರ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿದೆ ಎಂದಾದರೆ ಇದನ್ನು ತಡೆಯಲು ಏನು ಮಾಡಬೇಕೇಂದು ಯೋಚಿಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here