ಮಂಗಳೂರು: ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಟಿವಿ ಪರದೆಗಳಲ್ಲಿ ಜಾಹೀರಾತಿನ ವಿರಾಮದ ನಂತರ ಮೂರು ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರಸಾರಗೊಂಡಿದ್ದು, ನಿಲ್ದಾಣದಲ್ಲಿನ ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿದೆ. ಮಾ.19ರ ಬೆಳಗ್ಗೆ ಈ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿದ್ದು ಇದನ್ನೆಲ್ಲಾ ನೋಡಿ ಗೊಂದಲಕ್ಕೊಳಗಾದ ಪ್ರಯಾಣಿಕರು ಸಮಯ ವ್ಯರ್ಥ ಮಾಡದೆ ಸರ್ಕಾರಿ ರೈಲ್ವೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ರೈಲ್ವೆ ಭದ್ರತಾ ಪೊಲೀಸರು, ರೈಲ್ವೆ ನಿಲ್ದಾಣದಲ್ಲಿ ಜಾಹೀರಾತು ಪ್ರಸಾರ ಮಾಡುವ ಜವಾಬ್ದಾರಿ ಹೊತ್ತಿರುವ ದತ್ತಾ ಕಮ್ಯುನಿಕೇಶನ್ಸ್ ಸಂಸ್ಥೆಯನ್ನು ಸಂಪರ್ಕಿಸಿ, ಮಹಿಳೆಯರು ಮತ್ತು ಮಕ್ಕಳು ಒಳಗೊಂಡಂತೆ ಜನರ ಎದುರು ಅಶ್ಲೀಲ ಚಿತ್ರ ಪ್ರಸಾರ ಮಾಡುವುದನ್ನು ತಡೆ ಹಿಡಿಯಬೇಕು ಎಂದು ಸಂಸ್ಥೆಯ ನಿರ್ವಾಹಕರಿಗೆ ಸೂಚಿಸಿದ್ದಾರೆ.
ರೈಲ್ವೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ದತ್ತಾ ಕಮ್ಯುನಿಕೇಶನ್ಸ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿರುವ ರೈಲ್ವೆ ಇಲಾಖೆಯು, ಅದರ ಮೇಲೆ ದಂಡವನ್ನೂ ವಿಧಿಸಿದೆ. ಮಾತ್ರವಲ್ಲದೇ ದತ್ತಾ ಕಮ್ಯುನಿಕೇಶನ್ಸ್ಗೆ ನೀಡಿದ್ದ ಗುತ್ತಿಗೆಯನ್ನು ರೈಲ್ವೆ ಇಲಾಖೆಯು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ರೈಲ್ವೆ ಇಲಾಖೆಯು ಪ್ರತ್ಯೇಕ ತನಿಖೆ ಕೈಗೊಂಡಿದೆ. ಈ ನಡುವೆ, ನಿರ್ದಿಷ್ಟವಾಗಿ ಪ್ಲಾಟ್ಫಾರ್ಮ್ 10ರಲ್ಲೇ ಆ ಅಶ್ಲೀಲ ವಿಡಿಯೊ ಪ್ರಸಾರವಾಗಿರುವುದರ ಕುರಿತು ಕೆಲವು ಅಧಿಕಾರಿಗಳು ಪ್ರಶ್ನೆ ಎತ್ತಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ