ಮಂಗಳೂರು : ಪ್ರಧಾನಿ ಮೋದಿಯವರ ಪ್ರಮುಖ ಭಾಷಣಗಳನ್ನು ಉರ್ದು ಭಾಷೆಗೆ ಪರಿವರ್ತಿಸಿ, ಪುಸ್ತಕವಾಗಿ ಮುದ್ರಿಸಿ ‘ಮದರಸಾ’ ವಿದ್ಯಾರ್ಥಿಗಳಿಗೆ ನೀಡಲು ಉತ್ತರ ಪ್ರದೇಶ ರಾಜ್ಯ ಬಿಜೆಪಿ ಸರಕಾರ ನಿರ್ಧರಿಸಿದೆ.
ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವು ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಮೂಲಕ ಪ್ರಧಾನಿ ಮೋದಿಯವರ ಪ್ರಮುಖ ಭಾಷಣಗಳನ್ನು ಉರ್ದು ಭಾಷೆಗೆ ಭಾಷಾಂತರಿಸಿ, ಪುಸ್ತಕವಾಗಿ ಮುದ್ರಿಸಿ ಮದರಸಾ ವಿದ್ಯಾರ್ಥಿಗಳಿಗೆ ನೀಡಲು ತೀರ್ಮಾನಿಸಿದೆ.
ಪ್ರಧಾನಿ ಮೋದಿ ಅವರು ಪ್ರತಿ ತಿಂಗಳು ಕೊನೆಯ ಭಾನುವಾರದಂದು ‘ಮನ್ ಕಿ ಬಾತ್’ ಎಂಬ ಕಾರ್ಯಕ್ರಮದಲ್ಲಿ ರೇಡಿಯೋ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ. ಈ ಕಾರ್ಯಕ್ರಮದ ಮೂಲಕ, ದೈನಂದಿನ ಕಾರ್ಯಕ್ರಮಗಳು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಲಹೆ ಇತ್ಯಾದಿಗಳನ್ನು ಪ್ರಧಾನಿ ನೀಡುತ್ತಾರೆ. ನಾವು ಪ್ರಧಾನಿಯವರ ಈ ಭಾಷಣಗಳನ್ನು ಉರ್ದು ಭಾಷೆಯಲ್ಲಿ ಪರಿವರ್ತಿಸಿದ್ದೇವೆ. ಇವುಗಳನ್ನು ಪುಸ್ತಕಗಳಾಗಿ ಮುದ್ರಿಸಿ, ಉತ್ತರಪ್ರದೇಶದಲ್ಲಿ ಮದರಸಾ ಎಂದು ಕರೆಯಲ್ಪಡುವ ಇಸ್ಲಾಮಿಕ್ ಧಾರ್ಮಿಕ ಬೋಧನೆಗಳನ್ನು ಕಲ್ಪಿಸಿಕೊಡುವ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಇಸ್ಲಾಮಿಕ್ ವಿದ್ವಾಂಸರಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಅಧ್ಯಕ್ಷ ಕನ್ವರ್ ಬಾಷಿದ್ ತಿಳಿಸಿದ್ದಾರೆ. ರಂಜಾನ್ ಹಬ್ಬದಂದು ಪುಸ್ತಕ ವಿತರಣಾ ಕಾರ್ಯವನ್ನು ಆರಂಭಿಸಲಿದ್ದೇವೆ. ಪ್ರಧಾನಿಯವರ ಅಭಿಪ್ರಾಯಗಳನ್ನು ಮುಸ್ಲಿಂ ಜನರಿಗೆ ತಲುಪಿಸಲು ನಾವು ಈ ಪ್ರಯತ್ನ ಮಾಡುತ್ತಿದ್ದೇವೆ’. ಎಂದು ಅವರು ಹೇಳಿದ್ದಾರೆ.