ಮಂಗಳೂರು: ತಮಿಳುನಾಡಿನ ಪಾರ್ಲರ್ ಬೀಟ್ ಅರಣ್ಯ ಪ್ರದೇಶದ ಮೆಟ್ಟೂರು ಜಲಾಶಯದ ಹಿನ್ನೀರಿನಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಆನೆಮರಿಯನ್ನು ಸಾರ್ವಜನಿಕರು ರಕ್ಷಿಸಿ ತಾಯಿ ಮಡಿಲು ಸೇರಿಸಿರುವ ಘಟನೆ ವರದಿಯಾಗಿದೆ.
ಕರ್ನಾಟಕ ತಮಿಳುನಾಡು ವ್ಯಾಪ್ತಿಗೆ ಸೇರಿದ ಪಾಲರ್ ಬೀಟ್ ಅರಣ್ಯ ಪ್ರದೇಶದ ಮೆಟ್ಟೂರು ಜಲಾಶಯದ ಹಿನ್ನೀರಿನಲ್ಲಿ ನದಿ ದಾಟುವಾಗ ತಾಯಿ ಆನೆಯಿಂದ ಎರಡು ದಿನದ ಮರಿ ಆನೆ ಬೇರ್ಪಟ್ಟಿದೆ. ಮರಿಯಾನೆಯೊಂದಿಗೆ ತಾಯಿಯಾನೆ ನದಿ ದಾಟುವ ಸಂದರ್ಭದಲ್ಲಿ ತಾಯಿಯಾನೆ ಹಿನ್ನೀರು ದಾಟಿ ಆಚೆ ದಡ ಸೇರಿತ್ತು. ಆದರೆ ಮರಿಯಾನೆ ತಾಯಿಯಿಂದ ಬೇರ್ಪಟ್ಟು ನೀರಿನಲ್ಲಿ ಮುಳುಗಿ ಸಾಯುವ ಸ್ಥಿತಿಯಲ್ಲಿತ್ತು. ಮಹದೇಶ್ವರ ಬೆಟ್ಟದಿಂದ ತಮಿಳುನಾಡಿನ ಕೊಳತ್ತೂರಿಗೆ ತೆರಳುತ್ತಿದ್ದ ಸಾರ್ವಜನಿಕರು ಇದನ್ನು ಗಮನಿಸಿ ನದಿಯಲ್ಲಿ ಮುಳುಗುತ್ತಿದ್ದ ಮರಿಯಾನೆಯನ್ನು ರಕ್ಷಿಸಿದ್ದಾರೆ. ಬಳಿಕ ತಮಿಳುನಾಡಿನ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಇಲಾಖೆ ಸಿಬ್ಬಂದಿಗೆ ಮರಿಯಾನೆಯನ್ನು ಒಪ್ಪಿಸಿದ್ದಾರೆ. ತದನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಮರಿಯಾನೆಯನ್ನು ತಾಯಿ ಮಡಿಲಿಗೆ ಸೇರಿಸಿದ್ದಾರೆ.
ಮೆಟ್ಟೂರು ಜಲಾಶಯದ ಹಿನ್ನೀರು ಸಂಗ್ರಹವಾಗುವ ಸ್ಥಳವು ಬಹುತೇಕ ಅರಣ್ಯದಿಂದ ಕೂಡಿದ್ದು ಕರ್ನಾಟಕ ಗಡಿಯಂಚಿನವರೆಗೂ ಮೆಟ್ಟೂರಿನ ಹಿನ್ನಿರು ಆವೃತವಾಗಿದೆ ಅರಣ್ಯದಿಂದ ಕೂಡಿರುವ ಈ ಪ್ರದೇಶದಲ್ಲಿ ಹೆಚ್ಚಾಗಿ ಆನೆಗಳ ಆವಾಸಸ್ಥಾನವಾಗಿದ್ದು ಕರ್ನಾಟಕದಿಂದ ತಮಿಳುನಾಡು, ತಮಿಳುನಾಡಿನಿಂದ ಕರ್ನಾಟಕಕ್ಕೆ ನದಿ ಮಾರ್ಗವಾಗಿ ಆನೆಗಳು ಸಂಚರಿಸುತ್ತದೆ.