ಮಂಗಳೂರು: ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದ, ಬಹುಭಾಷಾ ನಟ ಶರತ್ ಬಾಬು ಆರೋಗ್ಯಸ್ಥಿತಿ ಗಂಭೀರವಾಗಿದೆ. 71 ವರ್ಷ ವಯಸ್ಸಿನ ಶರತ್ ಬಾಬು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು.
ಅವರ ಆರೋಗ್ಯ ಸ್ಥಿತಿ ಏರುಪೇರಾದ ಹಿನ್ನಲೆಯಲ್ಲಿ ಬುಧವಾರ ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳಲ್ಲೂ ನಟಿಸಿದ್ದ ಶರತ್ ಬಾಬು ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಯಾವ ಕಾಯಿಲೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹೊರಬಂದಿಲ್ಲ. ಶರತ್ ಬಾಬು ಅವರನ್ನು ನೋಡಲು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಅಭಿಮಾನಿಗಳು ಕೂಡ ಶರತ್ ಬಾಬು ಆರೋಗ್ಯದಲ್ಲಿ ಶೀಘ್ರದಲ್ಲಿ ಚೇತರಿಕೆ ಕಾಣಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. 1973ರಲ್ಲಿ ರಾಮರಾಜ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶರತ್ ಬಾಬು, ಮುಳ್ಳ ಬಂಧಂ, ಸೀತಕೋಕ ಚಿಲುಕ, ಸಂಸಾರ ಒಂದು ಚದರಂಗಂ, ಅಣ್ಣಯ್ಯ, ಆಪದ್ಭಾಂದವುಡು ಸೇರಿದಂತೆ ಕನ್ನಡದ ಅಮೃತ ವರ್ಷಿಣಿ ಮುಂತಾದ ಅದ್ಭುತ ಚಿತ್ರಗಳಲ್ಲಿ ನಟಿಸಿದ್ದಾರೆ. ನೆಗೆಟಿವ್ ರೋಲ್‌ಗಳಲ್ಲೂ ಅವರು ಮಿಂಚಿದ್ದರು.