ಮಂಗಳೂರು: ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2023-24ರ ಶೈಕ್ಷಣಿಕ ವರ್ಷ ಮೇ. 29ರಿಂದ ಪ್ರಾರಂಭಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಸುತ್ತೋಲೆ ಹೊರಡಿಸಿದೆ. ಮೊದಲ ಅವಧಿ ಮೇ 29ರಿಂದ ಅಕ್ಟೋಬರ್ 7ರ ತನಕ ಇರಲಿದ್ದು, ಅಕ್ಟೋಬರ್ 8ರಿಂದ ಅಕ್ಟೋಬರ್ 24ರ ತನಕ ದಸರಾ ರಜೆ ಇರಲಿದೆ. ಎರಡನೇ ಅವಧಿ ಅಕ್ಟೋಬರ್ 25ರಿಂದ 2024ರ ಎಪ್ರಿಲ್ 10ರ ವರೆಗೆ ಇರಲಿದೆ. ಎ.11ರಿಂದ ಬೇಸಗೆ ರಜೆ ಪ್ರಾರಂಭಗೊಳ್ಳಲಿದ್ದು ಮೇ 28ರ ವರೆಗೆ ರಜೆ ಇರಲಿದೆ.
ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಏಕರೂಪದ ಶೈಕ್ಷಣಿಕ ಚಟುವಟಿಕೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.ಇನ್ನು ಕೊರೊನಾದಿಂದಾಗಿ ಉಂಟಾದ ಕಲಿಕಾ ಹಿನ್ನಡೆಯನ್ನು/ಕಲಿಕಾ ಕೊರತೆಯನ್ನು ಸರಿದೂಗಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲೇ ಕಳೆದ ಬಾರಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕೊರೊನಾ ಪ್ರಭಾವದ ಶೈಕ್ಷಣಿಕ ವರ್ಷವೆಂದು ಪರಿಗಣಿಸಿ ಗ್ರೇಸ್ ಮಾರ್ಕ್ಸ್ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ಧರಿಸಿದ್ದು, ಶೇ.10 ಕೃಪಾಂಕ ನೀಡಿ ಉತ್ತೀರ್ಣಗೊಳಿಸಲಾಗುವುದು.