ಮಂಗಳೂರು: ಶಿವಸೇನೆಯ ಉದ್ದವ್ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ಮೊಬೈಲ್ ಫೋನ್‌ಗೆ ಮಾ.31 ಕೊಲೆ ಬೆದರಿಕೆ ಸಂದೇಶ ಬಂದಿದ್ದು, ಮುಂಬೈ ಪೊಲೀಸರಿಗೆ ದೂರು ನೀಡಲಾಗಿದೆ. ಪಂಜಾಬ್ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಪರವಾಗಿ ಬೆದರಿಕೆ ಸಂದೇಶ ಬಂದಿದ್ದು, ಈ ಸಂಬಂಧ ಓರ್ವ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
“ನನಗೆ ಮೊಬೈಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ ಮತ್ತು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದೇನೆ. ಆದರೆ, ಈ ಸರ್ಕಾರ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ನನಗೆ ಈ ಹಿಂದೆಯೂ ಬೆದರಿಕೆ ಒಡ್ಡಲಾಗಿತ್ತು. ಆದರೆ, ಈ ವಿಷಯವನ್ನು ರಾಜ್ಯ ಗೃಹ ಸಚಿವರು ನಟನೆ ಎಂದು ಗೇಲಿ ಮಾಡಿದ್ದರು” ಎಂದು ಹೇಳಿರುವ ರಾವತ್, “ರಾಜ್ಯ ಸರ್ಕಾರವು ವಿರೋಧ ಪಕ್ಷದ ನಾಯಕರಿಗೆ ಭದ್ರತೆ ಒದಗಿಸುವ ಕುರಿತು ಗಂಭೀರವಾಗಿಲ್ಲ” ಎಂದು ಆರೋಪಿಸಿದ್ದಾರೆ. ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಹಿಂದಿನ ಸೂತ್ರಧಾರಿ ಎಂದು ಹೇಳಲಾಗಿರುವ ಲಾರೆನ್ಸ್ ಬಿಷ್ಣೋಯ್ ಕುಖ್ಯಾತ ಅಪರಾಧಿಯಾಗಿದ್ದು, ಆತ ಗಾಯಕ ಸಿಧು ಮೂಸೆವಾಲಾರ ತಂದೆ ಬಾಲ್‌ಕೌರ್ ಸಿಂಗ್ ಹಾಗೂ ಖ್ಯಾತ ನಟ ಸಲ್ಮಾನ್ ಖಾನ್‌ಗೂ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿದ್ದಾನೆ.