ಮಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಕರ್ತವ್ಯಕ್ಕೆ ನಿಯೋಜನೆ ಗೊಂಡಿದ್ದ ಪೊಲೀಸರು ಕಾರೊಂದನ್ನು ತಪಾಸಣೆಗೊಳಪಡಿಸಲು ತಡೆದು ನಿಲ್ಲಿಸಿ ಬೆಚ್ಚಿ ಬಿದ್ದ ಪ್ರಕರಣ ಕುಮಟಾದಲ್ಲಿ ನಡೆದಿದೆ. ಕಾರನ್ನು ತಡೆದು ನಿಲ್ಲಿಸಿದ ಪೊಲೀಸರು ಕಿರೀಟ ಧರಿಸಿ ದೇವತೆಯಂತೆ ಕಂಗೊಳಿಸುವ ಕಾರು ಚಾಲಕನನ್ನು ಕಂಡು ದಿಗ್ಬ್ರಮೆಗೊಂಡಿದ್ದಾರೆ. ಸಾವರಿಸಿಕೊಂಡು ಕಾರು ಚಲಾಯಿಸುತ್ತಿದ್ದವರು ದೇವತೆಯಲ್ಲ ಬದಲಾಗಿ ಯಕ್ಷಗಾನ ಕಲಾವಿದರು ಎಂಬ ವಾಸ್ತವ ತಿಳಿದಾಗ ನಗು ಹೊರ ಹೊಮ್ಮಿದೆ.
ಆಗಷ್ಟೇ ಯಕ್ಷಗಾನ ಕಾರ್ಯಕ್ರಮವೊಂದನ್ನು ಮುಗಿಸಿ ಇನ್ನೊಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದಯಕ್ಷರಂಗದ ಹೆಣ್ಣು ವೇಷದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಲಾವಿದ ನಿಲ್ಕೋಡು ಶಂಕರ ಹೆಗಡೆ ಸಮಯದ ಅಭಾವದಿಂದಾಗಿ ಹಾಕಿ ಕೊಂಡಿದ್ದ ವೇಷ ಭೂಷಣ, ಬಣ್ಣ ಕಳಚದೆ ತನ್ನದೇ ಕಾರು ಚಲಾಯಿಸಿಕೊಂಡು ಕಾರ್ಯಕ್ರಮ ನಡಯುವತ್ತ ಸಾಗಿದ್ದಾರೆ. ಈ ವೇಳೆ ತಪಾಸಣೆಗಾಗಿ ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವಿಚಾರವನ್ನು ಖುದ್ದು ಶಂಕರ್ ಹೆಗಡೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಕಾರು ನಿಲ್ಲಿಸಿ ಆಶ್ಚರ್ಯಕ್ಕೊಳಗಾಗಿದ್ದ ಪೊಲೀಸರು ಯಕ್ಷಗಾನ ಕಲಾವಿದರೊಂದಿಗೆ ಫೋಟೋ ತೆಗೆದು ಸಂಭ್ರಮಿಸಿ ಮುಂದೆ ಹೋಗಲು ಅನುವು ಮಾಡಿ ಕೊಟ್ಟರು. ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ನೆನಪು ಎಂದು ಶಂಕರ್ ಹೆಗಡೆ ಹೇಳಿದ್ದಾರೆ.