ಕೇಪ್ ಕೆನವೆರಲ್ (ಅಮೆರಿಕ)/ಮಂಗಳೂರು: ನಾಸಾ ಗಗನಯಾನಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ಅಮೆರಿಕದ ಬುಚ್ ವಿಲ್ಮೋರ್ ಅವರನ್ನು ಮಾರ್ಚ್ 18ರಂದು ಮಂಗಳವಾರ ಅಮೆರಿಕದ ಸ್ಥಳೀಯ ಕಾಲಮಾನ ಸಂಜೆ 5.57ಕ್ಕೆ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ.
ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿರುವ ನಾಸಾ ನಮ್ಮ ಗಗನಯಾನಿಗಳನ್ನು ಯಶಸ್ವಿಯಾಗಿ ಕರೆತರುವ ಕೆಲಸ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಆರಂಭವಾಗಿದೆ ಎಂದು ಹೇಳಿದೆ. ಕಳೆದ ಒಂಬತ್ತು ತಿಂಗಳಿನಿಂದ ಐಎಸ್‌ಎಸ್‌ನಲ್ಲಿ ಸಿಲುಕಿಕೊಂಡಿರುವ ಸುನಿತಾ ಹಾಗೂ ಬುಚ್ ಅವರು ಭೂಮಿಗೆ ವಾಪಸಾಗುವುದು ಸನ್ನಿಹಿತವಾಗಿದೆ. ಸುನಿತಾ ಮತ್ತು ವಿಲ್ಮೋರ್ ಅಲ್ಲದೆ ಐಎಸ್‌ಎಸ್‌ನಲ್ಲಿರುವ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬನೊವ್ ಅವರೂ ಭೂಮಿಗೆ ಮರಳಲಿದ್ದಾರೆ. ನಾಲ್ವರನ್ನು ಹೊತ್ತ ಗಗನನೌಕೆಯು ಫ್ಲಾರಿಡಾದ ಕಡಲ ತೀರಕ್ಕೆ ಬುಧವಾರ ಬಂದಿಳಿಯುವ ಸಾಧ್ಯತೆಯಿದೆ.
ಸ್ಪೇಸ್‌ಎಕ್ಸ್‌ನ ‘ಫಾಲ್ಕನ್ 9’ ರಾಕೆಟ್ ಮೂಲಕ ಕೆನಡಿ ಸ್ಪೇಸ್ ಸೆಂಟರ್‌ನಿಂದ ಕಳೆದ ಶುಕ್ರವಾರ ರಾತ್ರಿ 7.03ಕ್ಕೆ ನಭಕ್ಕೆ ಚಿಮ್ಮಿದ್ದ ‘ಡ್ರ್ಯಾಗನ್’ ಹೆಸರಿನ ಗಗನನೌಕೆಯನ್ನು ಭಾನುವಾರ ಬೆಳಿಗ್ಗೆ ಐಎಸ್‌ಐಎಸ್‌ಗೆ (ಡಾಕಿಂಗ್) ಜೋಡಣೆ ಮಾಡಲಾಗಿತ್ತು. ಡ್ರ್ಯಾಗನ್ ಗಗನನೌಕೆಯಲ್ಲಿ ತೆರಳಿದ ನಾಲ್ವರು ಗಗನಯಾನಿಗಳು ಒಬ್ಬೊಬ್ಬರಾಗಿ ಐಎಸ್‌ಎಸ್ ಪ್ರವೇಶಿಸಿದ್ದು, ಸುನಿತಾ ಸೇರಿದಂತೆ ಅಲ್ಲಿದ್ದ ಗಗನಯಾನಿಗಳು ಅವರನ್ನು ತಬ್ಬಿಕೊಂಡು ಸ್ವಾಗತಿಸಿದರು.‘ಈ ದಿನ ನಿಜಕ್ಕೂ ಅದ್ಭುತವಾದುದು. ನಮ್ಮ ಸ್ನೇಹಿತರು ಬಂದಿರುವುದನ್ನು ನೋಡಲು ತುಂಬಾ ಸಂತಸವಾಗುತ್ತಿದೆ’ ಎಂದು ಸುನಿತಾ ಅವರು ಪ್ರತಿಕ್ರಿಯಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://x.com/i/status/1901149221610271099
https://x.com/i/status/1901149221610271099