



ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರಿಂದ ನಮ್ಮ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು. ಉದಾಹರಣೆಗೆ ಹಾಸನ ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಹೊಂದಾಣಿಕೆ ರಾಜಕಾರಣ ಕಾಣಬಹುದು ಎಂದು ಬಿಜೆಪಿ ಸಂಸದ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.







ಬೆಂಗಳೂರಿನಲ್ಲಿ ಜೂನ್ 27ರಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೊಂದಾಣಿಕೆ ರಾಜಕಾರಣಕ್ಕೆ ಹಾಸನದಲ್ಲಿ ನಮ್ಮ ಅಭ್ಯರ್ಥಿ ಸೋಲಬೇಕಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮತಗಳನ್ನು ನೋಡಿದರೆ ಹೊಂದಾಣಿಕೆ ರಾಜಕಾರಣ ಅರ್ಥವಾಗುತ್ತದೆ ಎಂದರು. ಹಾಗೆಯೇ ಸಿಟಿ ರವಿ ಕ್ಷೇತ್ರದಲ್ಲೂ ಈ ಹೊಂದಾಣಿಕೆ ರಾಜಕಾರಣ ಕಾಣಬಹುದು. ಇಲ್ಲಿ ಜೆಡಿಎಸ್ ಅಧಿಕೃತವಾಗಿ ಘೋಷಣೆ ಮಾಡಿದೆ. ಇದಲ್ಲದೆ ಬೇರೆ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಇದು ಒಳ ಒಪ್ಪಂದದ ರಾಜಕಾರಣಕ್ಕೆ ಉಂಟಾದ ಸೋಲು ನಮ್ಮದು ಎಂದು ಹೇಳಿದ್ದಾರೆ.



ಬಿಜೆಪಿ ಪಕ್ಷದಲ್ಲಿ ಒಳಒಪ್ಪಂದ ಆಗಿಯೇ ಇಲ್ಲ ಎಂದು ಹೇಳುವುದಿಲ್ಲ. ಕೆಲವರು ವೈಯತ್ತಿಕ ದ್ವೇಷಕ್ಕಾಗಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅಂತವರ ಬಗ್ಗೆ ಈಗಾಗಲೇ ಪಕ್ಷವೊಂದು ನಿರ್ಧಾರಕ್ಕೆ ಬಂದಿದೆ. ಈಗ ರಾಜ್ಯಾದ್ಯಂತ ಜಿಲ್ಲಾಮಟ್ಟದ ಸಭೆಗಳು ನಡೆಯುತ್ತಿವೆ. ಈ ಸಭೆಯಲ್ಲಿ ಸೋಲಿನ ಪರಾಮರ್ಶ ನಡೆಯುತ್ತಿದೆ. ಒಳ ಒಪ್ಪಂದ ಮಾಡಿಕೊಂಡವರ ಬಗ್ಗೆ ಪಕ್ಷ ಕಂಡಿತ ನಿರ್ಧಾರ ತೆಗೆದುಕೊಳ್ಳುತ್ತದೆ. ಸಂಘಟನೆಯಲ್ಲಿ ತಪ್ಪು ಮಾಡಿದವರನ್ನು ತಿದ್ದುವ ಕೆಲಸವನ್ನು ಪಕ್ಷ ಮಾಡುತ್ತೆ ಎಂದರು.











