ಮಂಗಳೂರು/ಪುತ್ತೂರು: ತಾಸೆ ,ಬ್ಯಾಂಡ್ ಶಬ್ದ ಕೇಳಿದರೆ ಸಾಕು, ಕಿವಿ, ಕಾಲು ಚುರುಕಾಗುತ್ತದೆ. ಮಾತ್ರವಲ್ಲ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ತಾಸೆ, ಬ್ಯಾಂಡ್ ಸದ್ದಿಗೆ ಹೆಜ್ಜೆ ಹಾಕುವ ಹುಲಿ ವೇಷದ ಸ್ಟೈಲೇ ಒಂಥರಾ.. ಆ ಸ್ಟೈಲಿಗೆ ಸೋಲದವರ ಸಂಖ್ಯೆ ಅತೀ ವಿರಳ. ಕಳೆದ ಒಂದೆರಡು ವರ್ಷಗಳಿಂದ ಪುತ್ತೂರಿನಲ್ಲಿ ಆರಂಭಗೊಂಡಿರುವ ಪಿಲಿನಲಿಕೆ, ಪಿಲಿಗೊಬ್ಬುನಂತಹ ಹುಲಿಕುಣಿತದ ಸ್ಪರ್ಧಾ ಪರಂಪರೆ ನೋಡುಗರ ಮೈನವಿರೇಳಿಸುವುದಂತೂ ನಿಜ.
ಹುಲಿ ಕುಣಿತದ ಹಿನ್ನೆಲೆ
ಕರಾವಳಿಯ ಜನರು ಯಕ್ಷಗಾನ, ದೈವಾರಾಧನೆ, ಮತ್ತು ಕಂಬಳಕ್ಕೆ ತೋರುವ ಒಲವು ಈಗ ಹುಲಿಕುಣಿತಕ್ಕೂ ಲಭ್ಯ. ಪಿಲಿನಲಿಕೆಯ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂಬ ಆಸೆಯಿದ್ದರೆ ನವರಾತ್ರಿ ಸಮಯದಲ್ಲಿ ಪುತ್ತೂರಿಗೆ ಬೇಟಿ ನೀಡಬೇಕು. ಹುಲಿಕುಣಿತ ಇಷ್ಟಪಡುವವರಿಗೆ ನವರಾತ್ರಿಯಯ ಒಂಭತ್ತು ದಿನಗಳು `ನಯಾದಿನ್ ನಯಾ ರಾತ್’ ಎಂದರೆ ತಪ್ಪಾಗಲಾರದು. ಮಹಿಳೆಯರು ಸೇರಿದಂತೆ ಸಣ್ಣ ಮಕ್ಕಳಿಂದ ಹಿಡಿದು ವಯೋವೃಧ್ಧರವರೆಗೂ ಆಸಕ್ತಿ ಅರಳಿಸುವ ಪಿಲಿನಲಿಕೆ, ಪಿಲಿಗೊಬ್ಬು ಮೇಲ್ನೋಟಕ್ಕೆ ಮನರಂಜನೆಯ ವಿಷಯವಾಗಿ ಕಂಡು ಬಂದರೂ ಇದರ ಹಿಂದೆ ದೇವಿ ಆರಾಧನೆಯ ಉದ್ದೇಶ ಸ್ಪಷ್ಟವಾಗಿದೆ. ಅಂದುಕೊಂಡಂತೆ ನಡೆದರೆ ಹುಲಿ ವೇಷ ಹಾಕಿ ದೇವಿ ಮುಂದೆ ನರ್ತಿಸುತ್ತೇನೆಂದು ಹರಕೆ ಹೇಳಿಕೊಳ್ಳುವ ಇಲ್ಲಿನ ಸಂಪ್ರದಾಯ ಇಂದು ನಿನ್ನೆಯದಲ್ಲ. ಹಾಗೇಂದೇ ಹುಲಿಕುಣಿತದ ಬಗ್ಗೆ ಕರಾವಳಿಯಲ್ಲಿ ನೂರಾರು ಐತಿಹ್ಯಗಳಿವೆ. ಅನಾರೋಗ್ಯಕ್ಕೆ ಈಡಾಗಿದ್ದ ಕಂದನಿಗಾಗಿ ತಾಯಿಯೊಬ್ಬಳು ಮಂಗಳೂರಿನ ಮಂಗಳಾದೇವಿ ದೇವಾಸ್ಥಾನಕ್ಕೆ ಬಂದು ಮಗುವಿನ ಆರೋಗ್ಯ ಸರಿಯಾದಲ್ಲಿ ಮಗುವಿಗೆ ಹುಲಿವೇಷ ಹಾಕಿ ದೇವಿಯ ಸನ್ನಿಧಿಯಲ್ಲಿ ನೃತ್ಯ ಮಾಡಿಸುವುದಾಗಿ ಹರಕೆ ಹೊತ್ತುಕೊಂಡಿದ್ದಳಂತೆ. ಹರಕೆ ಫಲಿಸಿ ಮಗು ಗುಣಮುಖವಾದಾಗ ದೇವಿಯ ಅಂಗಳದಲ್ಲಿ ಹುಲಿವೇಷವನ್ನು ಹಾಕಿಸಿ ನೃತ್ಯವನ್ನು ಮಾಡಿಸಿದ್ದಳಂತೆ. ಈ ಘಟನೆಯ ಬಳಿಕ ಹರಕೆ ಹೇಳುವವರ ಸಂಖ್ಯೆ ಅಧಿಕವಾಯಿತು ಎನ್ನುವ ಮಾತು ತುಳುನಾಡಿನಲ್ಲಿ ಪ್ರಚಲಿತ.
ಸರ್ವಧರ್ಮೀಯರು ಭಾಗವಹಿಸುವ ಹುಲಿ ಕುಣಿತ
ಧಾರ್ಮಿಕ ನಂಬಿಕೆಗಳು ಕೆಲವೊಂದು ಧರ್ಮ ಸಮುದಾಯಕ್ಕೆ ಸೀಮಿತವಾಗಿರುತ್ತದೆ. ಆದರೆ ಹುಲಿಕುಣಿತಕ್ಕೆ ಅಂತಹ ನಿರ್ಬಂಧವಿಲ್ಲ. ಅದೇ ಕಾರಣಕ್ಕೆ ಹಿಂದೂಗಳಲ್ಲದೇ ಮುಸ್ಲಿಂ, ಕ್ರೈಸ್ತ ಸಮುದಾಯದ ಜನರು ಹುಲಿವೇಷ ಹಾಕಿ ಹರಕೆ ಸಂದಾಯ ಮಾಡಿದ ಅದೆಷ್ಟೋ ಉದಾಹರಣೆಗಳು ಕರಾವಳಿಯಲ್ಲಿದೆ. ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯದಂತೆ ಉಡುಪಿ ಜಿಲ್ಲೆಯ ಎರ್ಮಾಳ್‍ನ ಮುಸ್ಲಿಂ ಕುಟುಂಬವೊಂದು ಹುಲಿವೇಷಕ್ಕೆ ಬಣ್ಣ ಬಳಿಯುವ ಮತ್ತು ತಾಸೆ ಬಡಿಯುವ ಕಾಯಕದಲ್ಲಿ ಇಂದಿಗೂ ಮುಂದುವರೆದಿದೆ. ಇದೇ ಕುಟುಂಬ ಉಡುಪಿ ಜಿಲ್ಲೆಯ ಹಲವೆಡೆ ನಡೆಯುವ ದೈವಾರಾಧನೆ ಕಾರ್ಯಕ್ರಮದಲ್ಲಿ ಇಂದಿಗೂ ನಾಗಸ್ವರ ನುಡಿಸುವ, ತಾಸೆ, ಡೋಲು ಬಡಿಯುವ ಕೆಲಸವನ್ನು ಮಾಡುತ್ತಿದೆ.
ಹುಲಿ ಕುಣಿತದಲ್ಲಿ ಪರಕಾಯ ಪ್ರವೇಶ
9 ದಿನಗಳ ವೃತಾಚರಣೆ, ಮಧು ಮಾಂಸ ಸೇವನೆ ಬಿಟ್ಟು ದೇವಿಯ ಅನುಗ್ರಹಕ್ಕಾಗಿ ಬಣ್ಣ ಬಳಿಯುವ ವೇಷಧಾರಿಗಳ ಮೈ ಮೇಲೆ ಕೆಲವೊಮ್ಮೆ ದೇವಿ ಅವಾಹನೆಯಾಗುವುದು ಇದೆ. ಇತ್ತೀಚೆಗೆ ವಿಟ್ಲ ಪಿಂಡಿ ಸಮಯದಲ್ಲಿ ಉಡುಪಿಯ ಕೊರಂಕ್ರಪಾಡಿ ಜ್ಯೂನಿಯರ್ ಪ್ರೆಂಡ್ಸ್ ಹುಲಿವೇಷ ತಂಡದ ಅಖಿಲೇಶ್ ಎಂಬುವವರ ಮೈ ಮೇಲೆ ದೇವಿ ಅವಾಹನೆಯಾದ ಘಟನೆ ಎಲ್ಲರನ್ನೂ ರೋಮಾಂಚನಗೊಳಿಸಿತ್ತು. ಹುಲಿ ನರ್ತನದಲ್ಲಿ ಪರಕಾಯ ಪ್ರವೇಶ ಮಾಡುವ ನರ್ತನಕಾರರಲ್ಲಿ ಇದು ಸಾಮಾನ್ಯವಾಗಿ ನಡೆಯುತ್ತದೆ ಎಂಬುದು ಉಡುಪಿಯ ಖ್ಯಾತ ಹುಲಿ ನರ್ತಕ ಚೇತನ್ ಅಭಿಪ್ರಾಯ.
ಮೈಹೊಳೆಯಲು ಗಾಜಿನ ಹುಡಿ ಬಳಕೆ
ಒಂದೊಮ್ಮೆ ಗಾಜನ್ನು ಧೂಳಿನಂತೆ ಹುಡಿಮಾಡಿ ಪೈಂಟ್ ಸೇರಿಸಿ, ಮೈ ತುಂಬಾ ಹಚ್ಚಿ ಶೈನಿಂಗ್ ಬರುವಂತೆ ಮಾಡಲಾಗುತ್ತಿತ್ತಂತೆ. ಆದರೆ ಈಗ ಆಯಿಲ್ ಪೈಂಟ್ ಬಳಸಿ ಬಣ್ಣ ಬಳಿಯಲಾಗುತ್ತದೆ. ಈ ಬಣ್ಣಗಾರಿಕೆ ದಕ್ಷಿಣ ಕನ್ನಡದಲ್ಲಿ ಮತ್ತು ಉಡುಪಿಯಲ್ಲಿ ಬೇರೆ ಬೇರೆಯಾಗಿರುವುದು ಒಂದು ವಿಶೇಷವಾದರೆ ಹಾಕುವ ಹೆಜ್ಜೆಯಲ್ಲು ಭಿನ್ನತೆ ಕಾಣಬಹುದು.
ಪಿಲಿಗೊಬ್ಬು ಕಾರ್ಯಕ್ರಮದ ಹಿಂದಿನ ರಿಂಗ್ ಮಾಸ್ಟರ್‌ಗಳು
ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯ ಒಂದೊಂದೇ ಮಜಲುಗಳನ್ನು ಏರುತ್ತಿರುವ ಹುಲಿಕುಣಿತದ ವೈಭವ ರಾಷ್ಟೀಯ ಮತ್ತು ಪ್ರಾದೇಶಿಕ ಟಿವಿ ಚಾನೆಲ್‍ಗಳಲ್ಲೂ ಪ್ರದರ್ಶನ ಕಂಡಿದೆ ಮಾತ್ರವಲ್ಲದೇ ಚಲನಚಿತ್ರಗಳಲ್ಲೂ ಅಗಾಧವಾಗಿ ಬಳಕೆಯಾಗಿದೆ. ಕರಾವಳಿಯ ಹಲವೆಡೆ ಹುಲಿಕುಣಿದ ” ಪಿಲಿನಲಿಕೆ” ” ಪಿಲಿರಂಗ್” “ಪಿಲಿಗೊಬ್ಬು” “ಪಿಲಿ ಏಸ” ಮುಂತಾದ ಹೆಸರಿನಲ್ಲಿ ಲಕ್ಷಗಟ್ಟಲೇ ಮೊತ್ತದ ಬಹುಮಾನ ನೀಡುವ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಕಳೆದ ಒಂದೆರಡು ವರ್ಷಗಳಿಂದ ಪುತ್ತೂರಿನಲ್ಲಿ ಇಂತಹ ಸ್ಪರ್ಧೆಗಳು ನಡೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಪುತ್ತೂರಿನ “ವಿಜಯ ಸಾಮ್ರಾಟ್” ಸಂಸ್ಥೆ ಮೊದಲ ಬಾರಿಗೆ “ಪಿಲಿಗೊಬ್ಬು”ಗೆ ವೇದಿಕೆ ಕಲ್ಪಿಸಿದ್ದು ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಯುವ ಉದ್ಯಮಿ ಸಹಜ್ ರೈ ಸಾರಥ್ಯದಲ್ಲಿ ಉಮೇಶ್ ನಾಯಕ್, ನಾಗರಾಜ್ ನಡುವಡ್ಕ, ಸುಜಿತ್ ರೈ ಪಾಲ್ತಾಡ್, ಶರತ್ ಆಳ್ವ ಕೂರೇಲು, ಸಂದೀಪ್ ರೈ ನಂಜೆ, ದೇವಿಪ್ರಸಾದ್ ಭಂಡಾರಿ, ಸುರೇಶ್ ಪಿದಪಟ್ಲ, ಶರತ್ ಕುಮಾರ್, ಶಂಕರ್ ಭಟ್, ರಾಜೇಶ್ ಕೆ ಗೌಡ, ಅಶೋಕ್ ಅಡೂರ್, ಅರುಣ್ ರೈ, ಉದಯ ಪಾಟಾಳಿ ಸೇರಿದಂತೆ ಸುಮಾರು 125 ಯುವ ಉತ್ಸಾಹಿ ತರುಣರು ಈ ಸಾಹಸಕ್ಕೆ ಕೈ ಹಾಕಿದ್ದು ಪಿಲಿಗೊಬ್ಬು ಕಾರ್ಯಕ್ರಮದ ಹಿಂದಿನ ರಿಂಗ್ ಮಾಸ್ಟರ್ ಗಳಾಗಿ ದುಡಿಯುತ್ತಿದ್ದಾರೆ.
ಶುಚಿ ರುಚಿಯಾದ ಫುಡ್ ಫೆಸ್ಟ್
ಪಿಲಿಗೊಬ್ಬು ಜೊತೆಗೆ ಅ.21ರಂದು ಸಂಜೆ 4 ಗಂಟೆಯಿಂದ ಅ.22ರ ರಾತ್ರಿ 12ಗಂಟೆ ವರೆಗೆ ಮೆಗಾ ಫುಡ್ ಸ್ಟಾಲ್ ಗಳಲ್ಲಿ ಬಾಯಲ್ಲಿ ನೀರೂರಿಸುವ ವೆರೈಟಿ ಫುಡ್ ಫೆಸ್ಟ್ ನಡೆಯಲಿದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡಲಿದೆ.
“ಪಿಲಿಗೊಬ್ಬು” ಬಣ್ಣ ಕಳಚದೆ ನೂರಾರು ವರ್ಷಗಳವರೆಗೆ ಮುಂದುವರಿಯಲಿ
ಉಡುಪಿಯಲ್ಲಿ ಹುಲಿಕುಣಿತಕ್ಕೆ ಸಂಬಂಧ ಪಟ್ಟಂತೆ ಸುಮಾರು 80 ತಂಡಗಳು, ದ.ಕ ಜಿಲ್ಲೆಯಲ್ಲಿ ಐವತ್ತಕ್ಕೂ ಹೆಚ್ಚು ತಂಡಗಳಿದ್ದು, ಹೆಚ್ಚಿನ ತಂಡಗಳು ಪಿಲಿಗೊಬ್ಬಿನಲ್ಲಿ ಭಾಗವಹಿಸಲಿದೆ. ಬ್ಯಾಂಡ್, ತಾಸೆಗಳ ಲಯಬದ್ದ ಬಡಿತ, ಮನಸೆಳೆಯುವ ಹುಲಿಕುಣಿತಕ್ಕೆ ಪುತ್ತೂರಿನ ಜನತೆ ಫಿದಾ ಆಗಲಿರುವುದಂತು ಖರೆ. ಪಟ್ಟೆ ಹುಲಿ, ಚಿಟ್ಟೆ ಹುಲಿ, ಕಪ್ಪು ಹುಲಿ, ತಾಯಿ ಹುಲಿ, ಶಾರ್ದೂಲ ಹೀಗೆ ವಿವಿಧ ಹುಲಿಗಳ ಬಣ್ಣಹಚ್ಚಿ ನರ್ತಿಸುವ ಹುಲಿನರ್ತಕರ “ಪಿಲಿಗೊಬ್ಬು” ಬಣ್ಣ ಕಳಚದೆ ನೂರಾರು ವರ್ಷಗಳವರೆಗೆ ಮುಂದುವರೆದು ಈ ಮಣ್ಣಿನ ಪಾರಂಪರಿಕ ಸಂಪ್ರದಾಯವನ್ನು ಎತ್ತಿ ಹಿಡಿಯುವ ವಿಜಯ ಸಾಮ್ರಾಟನಾಗಲಿ ಎಂಬುವುದು ಸುದ್ದಿ ಆಶಯ.