ನಂದಿಕೂರಿನಿಂದ ಕೇರಳಕ್ಕೆ 400 ಕೆವಿ ವಿದ್ಯುತ್ ಲೈನ್ – ಪರ್ಯಾಯ ಕ್ರಮದ ರೈತರ ಬೇಡಿಕೆ ಈಡೇರಿಸಲು ಮಾಜಿ ಸಚಿವ ರಮಾನಾಥ ರೈ ಒತ್ತಾಯ

ಮಂಗಳೂರು: ಉಡುಪಿಯ ನಂದಿಕೂರಿನಿಂದ ಕೇರಳಕ್ಕೆ 400 ಕೆವಿ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯಿಂದ ಸಣ್ಣ ಹಾಗೂ ಅತೀ ಸಣ್ಣ ರೈತರು, ಹಿಡುವಳಿದಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಭೂಗತ ವ್ಯವಸ್ಥೆಯ ಮೂಲಕ ಪರ್ಯಾಯ ಕ್ರಮಕ್ಕಾಗಿನ ರೈತರ ಬೇಡಿಕೆಯನ್ನು ಈಡೇರಿಸಲು ಕಾಮಗಾರಿ ಕೈಗೆತ್ತಿಕೊಂಡಿರುವ ಸಂಸ್ಥೆ ಹಾಗೂ ಸರಕಾರ ಮುಂದಾಗಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಅ.16 ರಂದು 400 ಕೆವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ರೈತರ ಪರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಹಾದು ಹೋಗುವ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿದಂತೆ ಉಭಯ ಜಿಲ್ಲೆಗಳ ರೈತರನ್ನು ವಿಶ್ವಾಸಕ್ಕೆ ಪಡೆಯದೆ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಹಲವು ಸಮಯದಿಂದ ರೈತರು ಪ್ರತಿಭಟನೆಯ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಆ ರೈತರಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿರುವುದಾಗಿ ಹೇಳಿದರು.

ಗುತ್ತಿಗೆ ವಹಿಸಿರುವ ಸ್ಟೆರಿಲೈಟ್ ಕಂಪೆನಿ ಹೈಟೆನ್ಶನ್ ಲೈನ್ ಹಾಕಲು ಸಮೀಕ್ಷೆ ನಡೆಸುತ್ತಿದೆ. ಇದರಿಂದ ರೈತರಿಗೆ ತೊಂದರೆ ಮಾತ್ರವಲ್ಲದೆ, ಪರಿಸರ ಹಾಗೂ ವನ್ಯಜೀವಿಗಳಿಗೆ ಹಾನಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲ ಅಥವಾ ಸಮುದ್ರ ಮೂಲಕ ಈ ಸಂಪರ್ಕಕ್ಕೆ ಪರ್ಯಾಯ ಕ್ರಮ ವಹಿಸಬೇಕು. ಈ ಹೈಟೆನ್ಶನ್ ಲೈನ್ ಹಾದುಹೋಗುವ ಭಾಗಗಳಲ್ಲಿ ಗರಿಷ್ಠ ಮೂರು ಎಕರೆಯೊಳಗಿನ ಭೂಮಿಯನ್ನು ಹೊಂದಿರುವ ಸಣ್ಣ ರೈತರು, ಅಡಿಕೆ, ತೆಂಗು, ಕರಿಮೆಣಸು ಮೊದಲಾದ ತೋಟಗಾರಿಕಾ ಬೆಳೆಯನ್ನು ಅವಲಂಬಿಸಿರುವವರು. ಗ್ರಾಮೀಣ ವಿದ್ಯುಚ್ಛಕ್ತಿ ನಿಗಮ ಈ ಬಗ್ಗೆ ಗಮನಹರಿಸಬೇಕು. 900 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಇಷ್ಟು ದೊಡ್ಡ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಗೆ ಪರ್ಯಾಯ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕ್ರಮ ವಹಿಸುವುದು ದೊಡ್ಡ ವಿಷಯವೇನಲ್ಲ ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬೇಬಿಕುಂದರ್, ಸುಧೀರ್ ಕುಮಾರ್, ಚಿತ್ತರಂಜನ್, ಅನ್ನು ಗೌಡ, ಸಂಜೀವ ಗೌಡ, ಪದ್ಮನಾಭ ಗೌಡ, ಆಲ್ವಿನ್, ಪಿಯುಸಿಲ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here