2 ಕೋಟಿ ಹಣದೊಂದಿಗೆ ATMಗೆ ಹಣ ತುಂಬಿಸುವ ವಾಹನ ಅಪಹರಣ-ಸಿನಿಮಾ ಸಿನಿಮಿಯಾ ರೀತಿಯಲ್ಲಿ ಅಪಹರಣಕಾರರ ಬಂಧನ

ಮಂಗಳೂರು/ಗಾಂಧಿಧಾಮ: ಎಟಿಎಂಗಳಿಗೆ ಹಣ ತುಂಬಲು ₹2.13 ಕೋಟಿ ನಗದು ಹೊತ್ತು ಸಾಗುತ್ತಿದ್ದ ವಾಹನದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಬಂಧಿಸಿರುವ ಪ್ರಕರಣ ಗುಜರಾತ್‌ನ ಗಾಂಧಿಧಾಮದಲ್ಲಿ ಶನಿವಾರ ನಡೆದಿದೆ.

ಬಂಧಿತರಲ್ಲಿ ಇಬ್ಬರು ಎಟಿಎಂಗಳಿಗೆ ಹಣ ತುಂಬುವ ನಿರ್ವಹಣೆ ಹೊತ್ತ ಸಂಸ್ಥೆಯ ಉದ್ಯೋಗಿಗಳು. ಶುಕ್ರವಾರ ಬೆಳಿಗ್ಗೆ ಈ ಕೃತ್ಯ ನಡೆದಿತ್ತು. ಇದಾಗಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಕಛ್‌ ಜಿಲ್ಲೆಯ ಗಾಂಧಿಧಾಮದ ಬ್ಯಾಂಕ್‌ ವೃತ್ತದಲ್ಲಿ ಎಟಿಎಂಗಳಿಗೆ ಹಣ ತುಂಬುವ ನಿರ್ವಹಣೆ ಹೊತ್ತ ಸಂಸ್ಥೆಗೆ ಸೇರಿದ ಐವರು ಸಿಬ್ಬಂದಿ ವ್ಯಾನ್‌ಗೆ ₹ 2.13 ಕೋಟಿ ತುಂಬಿಟ್ಟು ಚಹಾ ಸೇವಿಸಲು ಸಮೀಪದ ಕ್ಯಾಂಟೀನ್‌ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಬೇರೊಬ್ಬ ವ್ಯಕ್ತಿ ನಕಲಿ ಕೀಲಿ ಬಳಸಿ ವಾಹನ ಅಪಹರಿಸಿದ್ದಾನೆ. ಇದನ್ನು ಅರಿತ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿ ದೀಪಕ್ ಸತ್ವಾರಾ ಅವರು, ಬೈಕ್ ಸವಾರರೊಬ್ಬರ ನೆರವು ಪಡೆದು ವಾಹನ ಹಿಂಬಾಲಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಗರ್‌ ಬರ್ಮಾರ್ ತಿಳಿಸಿದ್ದಾರೆ.

‘ಈ ಸಂದರ್ಭದಲ್ಲಿ ವೇಗವಾಗಿ ಹೋಗುತ್ತಿದ್ದ ವ್ಯಾನ್‌, ಕಾರಿಗೆ ಡಿಕ್ಕಿಯಾಗಿದೆ. ಆಗಲೂ ವಾಹನ ನಿಲ್ಲಿಸಿದೆ ಅಪಹರಣಕಾರು ಮುಂದಕ್ಕೆ ಸಾಗಿದ್ದಾನೆ. ಈ ಸಂದರ್ಭದಲ್ಲಿ ಅಪಘಾತಕ್ಕೀಡಾದ ಕಾರಿನ ಚಾಲಕ ಸಹ ಪೊಲೀಸ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅಧಿಕಾರಿಯನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ವ್ಯಾನ್‌ ಅನ್ನು ಬೆನ್ನಟ್ಟಿದ್ದಾರೆ. ಇದನ್ನು ಅರಿತ ಆರೋಪಿ, ಊರಿನ ಹೊರವಲಯದಲ್ಲಿ ವ್ಯಾನ್‌ ಬಿಟ್ಟು, ತನ್ನ ಸಹಚರರ ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದಾನೆ’ ಎಂದು ವಿವರಿಸಿದ್ದಾರೆ.

‘ವ್ಯಾನ್‌ನಲ್ಲಿದ್ದ ₹2.13 ಕೋಟಿ ನಗದು ವಶಕ್ಕೆ ಪಡೆದ ಪೊಲೀಸರು, ಆರೋಪಿಗಳ ಬಂಧನಕ್ಕೆ ತಂಡ ರಚಿಸಿ ತಕ್ಷಣ ಕಾರ್ಯಪ್ರವೃತ್ತರಾದರು. ಸಿಸಿಟಿವಿ ದೃಶ್ಯಾವಳಿ ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ಆರು ಜನರನ್ನು ಬಂಧಿಸಲಾಗಿದೆ. ದಿನೇಶ ಫಫಾಲ್‌ (21) ವ್ಯಾನ್ ಅಪಹರಿಸಿದ ವ್ಯಕ್ತಿ. ರಾಹುಲ್ ಸಂಜೋತ್ (25), ವಿವೇಕ್ ಸಂಜೋತ್ (22), ರಾಹುಲ್ ಬಾರೋತ್ (20), ನಿತಿನ್ ಭಾನುಶಾಲಿ (23) ಹಾಗೂ ಗೌತಮ್ ವಿನ್‌ಝೋಡಾ (19) ಬಂಧಿತ ಆರೋಪಿಗಳು. ಇವರೆಲ್ಲರೂ ಕಛ್ ಜಿಲ್ಲೆಯ ನಿವಾಸಿಗಳು’ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

‘ವಿವೇಕ್ ಹಾಗೂ ನಿತಿನ್ ಇಬ್ಬರು ಈ ಹಣ ತುಂಬುವ ಕಂಪನಿಯ ಸಿಬ್ಬಂದಿಗಳು. ಇವರು ಬ್ಯಾಂಕ್‌ನಿಂದ ಹಣ ಸಂಗ್ರಹಿಸಿ, ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿ ಹೊತ್ತಿದ್ದರು. ಎರಡು ತಿಂಗಳ ಹಿಂದೆ ಈ ಇಬ್ಬರು ಸಂಗ್ರಹ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇವರ ಈ ಕೃತ್ಯದ ಯೋಜನೆಯನ್ನು ಪೊಲೀಸರು ಮತ್ತು ಸ್ಥಳೀಯರು ಸೇರಿ ವಿಫಲಗೊಳಿಸಿದ್ದಾರೆ’ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here