ಮಂಗಳೂರು (ಅಹ್ಮದಾಬಾದ್): ದ್ವಾರಕೆ, ಕೃಷ್ಣನ ನಗರಿ ಎಂದೇ ಖ್ಯಾತಿಯನ್ನು ಪಡೆದಿದೆ. ಈ ನಗರಿ ಮಹಾಭಾರತ ಕಾಲದಿಂದಲೂ ಕೃಷ್ಣನ ಹೆಜ್ಜೆಗಳ ಗುರುತನ್ನು ಉಳಿಸಿಕೊಂಡು ಬಂದಿದೆ. ಮಥುರೆಯನ್ನು ತೊರೆದು ಇಡೀ ಯಾದವರ ಕುಟುಂಬಗಳೊಂದಿಗೆ ದ್ವಾರಕೆಗೆ ಬರುವ ಕೃಷ್ಣ ಅಲ್ಲಿಯೇ ಒಂದು ನಗರವನ್ನು ಕಟ್ಟಿ, ತನ್ನದೇ ಒಂದು ಸಾಮ್ರಾಜ್ಯ ಸಿದ್ಧಗೊಳಿಸುತ್ತಾನೆ. ಮುಂದೆ ಮಹಾಭಾರತದ ಯುದ್ಧ ಮುಗಿದು ಯಾದವರ ಕಲಹ ನಡೆದು ಇಡೀ ಯಾದವ ಕುಲವೇ ಸರ್ವನಾಶವಾದಾಗ ಶ್ರೀಕೃಷ್ಣನೂ ಬೇಡನು ಬಿಟ್ಟ ಬಾಣದಿಂದ ಹತನಾಗಿ ಈ ಲೋಕದಿಂದ ನಿರ್ಗಮಿಸುತ್ತಾನೆ. ಕೃಷ್ಣನ ನಿರ್ಗಮನದ ನಂತರ ಇಡೀ ದ್ವಾರಕೆ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ಇಂದಿಗೂ ಕೂಡ ದ್ವಾರಕೆಯ ಸಮುದ್ರಾದಳದಲ್ಲಿ ಕೃಷ್ಣನ ದ್ವಾರಕೆ ಇತ್ತು ಅನ್ನೋದಕ್ಕೆ ಹಲವು ಕುರುಹುಗಳು ಸಿಗುತ್ತವೆ.
ಶಿವಮೊಗ್ಗ ಜಿಲ್ಲೆಯ ಎಸ್ ಆರ್ ರಾವ್, ಶಿಖಾರಿಪುರ ರಂಗನಾಥ್ ರಾವ್ ಎಂಬ ಪುರತಾತ್ವಶಾಸ್ತ್ರಜ್ಞ ನಡೆಸಿದ ಸಮುದ್ರ ಉತ್ಖನನದಲ್ಲಿ ಈ ಬಗ್ಗೆ ಹಲವು ಪುರಾವೆಗಳು ಸಿಕ್ಕಿವೆ. ಅವರ ‘ಸಮುದ್ರದಲ್ಲಿ ಮುಳುಗಿದ ಶ್ರೀಕೃಷ್ಣನ ದ್ವಾರಕೆ’ ಅನ್ನೋ ಪುಸ್ತಕದಲ್ಲೂ ಕೂಡ ಇದರ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ. ಅಂತಹ ದ್ವಾರಕಾ ನಗರವನ್ನು ಈಗ ಸಾಮಾನ್ಯ ಜನರು ಕೂಡ ನೋಡಿ ಕಣ್ತುಂಬಿಕೊಳ್ಳಬಹುದು. ಅಂತಹದೊಂದು ಸಾಹಸಕ್ಕೆ ಗುಜರಾತ್ ಸರ್ಕಾರ ಕೈಹಾಕಿದೆ.
ಗುಜರಾತ್ ಸರ್ಕಾರ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯನ್ನೊಂದಿಟ್ಟಿದೆ. ಗುಜರಾತ್ನ ಪಶ್ಚಿಮ ದಿಕ್ಕಿನಲ್ಲಿ ಕಟ್ಟಕಡೆಯ ನಗರವೇನೋ ಅನ್ನುವ ರೀತಿ ಸಮುದ್ರಕ್ಕೆ ಅಂಟಿಕೊಂಡಿರುವ ದ್ವಾರಕಾದಲ್ಲಿ ಮುಂದಿನ ದಿನಗಳಲ್ಲಿ ಸಬ್ಮೆರಿನ್ ಅಡ್ವೆಂಚರ್ ವ್ಯವಸ್ಥೆಯನ್ನು ಮಾಡಲು ಗುಜರಾತ್ ಸರ್ಕಾರ ಸಜ್ಜಾಗಿದೆ. ಸದ್ಯ ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಹಿಂದೆಂದಿಗಿಂತಲೂ ಅದ್ಭುತವಾಗಿ ಲಾಭ ಗಳಿಸುತ್ತಿದೆ. ಅದರಲ್ಲೂ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಹರಿದು ಬರುತ್ತಿದ್ದಾರೆ. ಅದೇ ರೀತಿ ದ್ವಾರಕೆಯಲ್ಲಿಯೂ ಸಹ ಭಕ್ತರ ಸಂಖ್ಯೆಗೇನೂ ಕಡಿಮೆಯಿಲ್ಲ. ದೇಶ ವಿದೇಶಗಳಿಂದ ಇಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ಹೀಗಾಗಿ ಅದಕ್ಕೆ ಮತ್ತಷ್ಟು ಉತ್ತೇಜನ ನೀಡಲು ಗುಜರಾತ್ ಸರ್ಕಾರ ದ್ವಾರಕಾದಲ್ಲಿ ಸಬ್ಮೆರಿನ್ ಅಡ್ವೆಂಚರ್ ನಡೆಸಲು ಸಜ್ಜಾಗಿದೆ.
ಸಬ್ಮೆರಿನ್ ಅಡ್ವೆಂಚರ್ ಅಂದ್ರೆ 30 ಮೀಟರ್ ಸಮುದ್ರದಾಳದ ಪ್ರಯಾಣ. 2 ತಾಸುಗಳ ಈ ಪ್ರಯಾಣದಲ್ಲಿ 45 ನಿಮಿಷಗಳ ಕಾಲ ಸಮುದ್ರದಾಳದೊಳಗೆ ಪ್ರಯಾಣಿಸುವ ಒಂದು ವ್ಯವಸ್ಥೆ ಇದೇ ವ್ಯವಸ್ಥೆಯನ್ನು ಈಗ ದ್ವಾರಕದಲ್ಲಿ ಮಾಡಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಈ ಮೂಲಕ ದ್ವಾರಕೆಯಲ್ಲಿ ಮುಳುಗಿದ ಕೃಷ್ಣನ ನಗರಿಯನ್ನು ಭಕ್ತರಿಗೆ ಹಾಗೂ ಪ್ರವಾಸಿಗಳಿಗೆ ತೋರಿಸಲು ಸಜ್ಜಾಗಿದೆ.
ಇದು ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ಕಲಿಯುಗದ ಆರಂಭದಲ್ಲಿ ಮುಳುಗಿದ 5 ಸಾವಿರ ವರ್ಷಗಳ ಇತಿಹಾಸವಿರುವ ಒಂದು ನಗರಿಯನ್ನು ಭಕ್ತರಿಗೆ ದರ್ಶನ ಮಾಡಿಸಲು ಸಜ್ಜಾಗಿದೆ. ಅರಬ್ಬಿ ಸಮುದ್ರದಲ್ಲಿ ಸಬ್ಮೆರಿನ್ ಮೂಲಕ ಸಮುದ್ರದಾಳಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಅವರಿಗೆ ಕೃಷ್ಣ ನಗರಿಯನ್ನು ಪರಿಚಯಿಸಲಿದೆ.