ಮಂಗಳೂರು/ಮುಜಾಫರ್ನಗರ: ಉತ್ತರ ಪ್ರದೇಶದ ಮುಜಾಫರ್ನಗರದ ಸ್ಥಳೀಯ ಆಸ್ಪತ್ರೆಯ ವೈದ್ಯರು ಯಡವಟ್ಟು ಮಾಡಿದ್ದು, ಯುವಕನೊಬ್ಬನ ಲಿಂಗವನ್ನು ಬದಲಾಯಿಸಿ ಕೈಸುಟ್ಟುಕೊಂಡಿದ್ದಾರೆ. ಪ್ರಕರಣ ದೊಡ್ಡದಾಗುತ್ತಿದ್ದಂತೆಯೇ ಆಸ್ಪತ್ರೆ ವ್ಯಕ್ತಿಯ ಆರೋಪವನ್ನು ನಿರಾಕರಿಸಿದ್ದು, ಆತ ಹೇಳಿದ ಕಾರಣಕ್ಕೆ ಲಿಂಗ ಬದಲಾವಣೆ ಮಾಡಲಾಗಿದೆ ಎಂದು ಹೇಳಿದೆ.
ನನಗೆ ಓಂ ಪ್ರಕಾಶ್ ಎಂಬಾತ ಪರಿಚಯವಿದ್ದು ಈತ ನನಗೆ ಕಿರುಕುಳ ನೀಡುತ್ತಿದ್ದ. ಜೂನ್ ಮೂರರಂದು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಅಲ್ಲಿ ನನಗೆ ಅರೆವಳಿಕೆ ನೀಡಿ ಎಚ್ಚರ ತಪ್ಪುವಂತೆ ಮಾಡಿದ್ದಾರೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನನಗೆ ಮಾರನೇಯ ದಿನ ಎಚ್ಚರವಾದಾಗ ನನ್ನ ಖಾಸಗಿ ಭಾಗವನ್ನು ಕಟ್ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಇಲ್ಲಿನ ಸಂಜಕ್ ಗ್ರಾಮದ ನಿವಾಸಿ ಮುಜಾಹಿದ್(20)ಎಂಬ ಯುವಕ ಆರೋಪಿಸಿದ್ದಾನೆ.
ನನಗೆ ಎಚ್ಚರವಾದಾಗ ಓಂಪ್ರಕಾಶ್ ನೀನೀಗ ಹೆಣ್ಣಾಗಿದ್ದಿ. ನಾನು ನಿನ್ನನ್ನು ಲಖನೌಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನಿನ್ನನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಆಗ ಆತ ನನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು ನಮ್ಮ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಡುವಂತೆ ಆವಾಜ್ ಹಾಕಿದ್ದಾನೆ. ಇದರಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತ ಮುಜಾಹಿದ್ ಆರೋಪಿಸಿದ್ದಾನೆ. ಸಂತ್ರಸ್ತನ ತಂದೆ ನೀಡಿದ ದೂರಿನ ಆಧಾರದ ಮೇಲೆ ಜೂನ್ 16 ರಂದು ಓಂಪ್ರಕಾಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಭಾರೀ ಸಂಚಲನ ಮೂಡಿಸಿರುವ ಈ ಕೇಸ್ಗೆ ಭಾರತೀಯ ಕಿಸಾನ್ ಯೂನಿಯನ್ ಬೆಂಬಲ ನೀಡಿದ್ದು, ಪ್ರತಿಭಟನೆ ನೆಡಸಿದೆ. ಇನ್ನು ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.