ಮಂಗಳೂರು/ಮುಂಬೈ: ಮಹಿಳೆಯೊಬ್ಬರಿಗೆ ಮನೆ ದಾಖಲೆಗಳು ಸರಿ ಇಲ್ಲ ಎಂದು ಸಾಲ ನೀಡಲು ನಿರಾಕರಿಸಿದ್ದು ಅದೇ ಮಹಿಳೆ ಬ್ಯಾಂಕ್ ಸಿಇಒನನ್ನೇ ದಿವಾಳಿಯಾಗುವಂತೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಮಹಿಳೆಯೊಬ್ಬರು ಬ್ಯಾಂಕ್‌ಗೆ ಹೋಗಿ ಲೋನ್ ಕೇಳಿದ್ದಾಳೆ. ಆದರೆ ಮನೆ ದಾಖಲೆಗಳು ಸರಿ ಇಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಲೋನ್ ನೀಡಲು ನಿರಾಕರಿಸಿದ್ದಾರೆ. ನಂತರದ ಬೆಳವಣಿಗೆಯಲ್ಲಿ ದಾಖಲೆಗಳ ಪರಿಶೀಲನೆಗಾಗಿ ಮನೆಗೆ ಬಂದ ಬ್ಯಾಂಕ್ ಅಧಿಕಾರಿಯನ್ನೇ ಮೈಮಾಟ ತೋರಿಸಿ ಬಲೆಗೆ ಬೀಳುವಂತೆ ಮಾಡಿದ ಮಹಿಳೆ ಬ್ಯಾಂಕ್ ಅಧಿಕಾರಿಯನ್ನು ದಿವಾಳಿಯಾಗುವಂತೆ ಮಾಡಿದ್ದಾಳೆ. ಆಕೆಯ ಬ್ಲಾಕ್‌ಮೇಲ್‌ಗೆ ಬೆದರಿದ ಬ್ಯಾಂಕ್ ಸಿಇಒ ಮನೆ, ಫ್ಲಾಟ್ ಸೇರಿದಂತೆ ಎಲ್ಲವನ್ನು ಮಾರಿ ಪಿಎಫ್ ಹಣವನ್ನು ಕಳೆದುಕೊಂಡು, ಕೈ ತುಂಬಾ ಸಾಲವನ್ನು ಮಾಡಿದರೂ ಈ ಧನದಾಹಿ ಹೆಣ್ಣಿನಿಂದಾಗಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದು ಆಕೆಯ ಆಸೆ ತೀರದೇ ಹೋದಾಗ ನಿಧಾನವಾಗಿ ಪೊಲೀಸರ ಮೊರೆ ಹೋಗಿದ್ದಾರೆ. ನಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಥಾಣೆ ಮೂಲದ 45 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಅಂದಹಾಗೆ ಈ ನಿವೃತ್ತ ಬ್ಯಾಂಕ್ ಸಿಇಒ ಈಕೆಯ ಜೊತೆ ಕಳೆದ ಕೆಲ ರಸನಿಮಿಷಗಳಿಗಾಗಿ ಕಳೆದುಕೊಂಡಿದ್ದು 4 ಕೋಟಿಗೂ ಅಧಿಕ.
66 ವರ್ಷದ ನವೀ ಮುಂಬೈನ ನಿವಾಸಿ ಈ ರೀತಿ ಬ್ಲಾಕ್ ಮೇಲ್‌ಗೆ ಒಳಗಾಗಿ ಎಲ್ಲವನ್ನು ಕಳೆದುಕೊಂಡವರು. ಕೋ ಅಪರೇಟಿವ್ ಬ್ಯಾಂಕೊಂದರ ಸಿಇಒ ಆಗಿದ್ದ ಇವರು 2016ರಲ್ಲಿ ಮೊದಲ ಬಾರಿ ಮಹಿಳೆಯನ್ನು ಭೇಟಿಯಾಗಿದ್ದಾರೆ. ತಮ್ಮ ಬ್ಯಾಂಕ್‌ನ ವಡಾಲಾ ಬ್ರಾಂಚ್‌ನಲ್ಲಿ ಪರಿಚಿತರೊಬ್ಬರ ಮೂಲಕ ಈಕೆಯೊಂದಿಗೆ ಮೊದಲ ಭೇಟಿಯಾಗಿದೆ. ಅವರ ಪ್ರಕಾರ, ಪ್ರಾರಂಭದಲ್ಲಿ ಮಹಿಳೆ ತಾನು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ತನಗೆ ಲೋನ್ ಬೇಕು ಎಂದು ಮನವಿ ಮಾಡಿದ್ದಾಳೆ. ಆದರೆ ಲೋನ್ ಪ್ರಕ್ರಿಯೆಯ ವೇಳೆ ಆಕೆ ನೀಡಿದ ಡಾಕ್ಯುಮೆಂಟುಗಳು ಸರಿ ಇಲ್ಲ ಎಂಬುದು ಬ್ಯಾಂಕ್ ಸಿಬ್ಬಂದಿ ಅರಿವಿಗೆ ಬಂದಿದ್ದು, ಅವರು ಆಕೆಯ ಮನೆಯನ್ನು ಸರ್ವೇ ಮಾಡಲು ಮುಂದಾಗಿದ್ದಾರೆ. ಅದರಂತೆ ಥಾಣೆಯ ಕೊಪ್ರಿ ಬಳಿ ಇರುವ ಆನಂದ್ ನಗರ ಪ್ರದೇಶದಲ್ಲಿರುವ ಮನೆಗೆ ಮನೆ ಸಮೀಕ್ಷೆಗಾಗಿ ಸಿಇಒ ಒಬ್ಬರೇ ತೆರಳಿದ್ದಾರೆ.
2017ರ ಫೆಬ್ರವರಿಯಲ್ಲಿ ಸಿಇಒ ಈಕೆಯ ಮನೆ ದಾಖಲೆ ಪರಿಶೀಲನೆಗೆ ಬಂದಿದ್ದು, ಈ ವೇಳೆ ಮಹಿಳೆ ಆತನನ್ನು ಮೈಮಾಟ ತೋರಿಸಿ ಮಂಚಕ್ಕೆ ಕರೆದಿದ್ದಾಳೆ. ಇದಾದ ನಂತರ ಆಕೆಗೆ ಪ್ರತಿ ತಿಂಗಳು 7300 ರೂ ಇಎಂಐ ಕಟ್ಟುವಂತೆ 3 ಲಕ್ಷ ರೂಪಾಯಿ ಸಾಲ ನೀಡಲಾಗಿದೆ. ಆದರೆ ಇದಾಗಿ ಒಂದು ತಿಂಗಳ ನಂತರ ಮಹಿಳೆ ಬ್ಯಾಂಕ್ ಸಿಇಒನನ್ನು ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ್ದಾಳೆ. ಅಲ್ಲದೇ ಆತ್ಮೀಯತೆಯ ವೇಳೆ ಬ್ಯಾಂಕ್ ಸಿಇಒ ಆಕೆಯ ಮೊಬೈಲ್ ಫೋನ್‌ಗೆ ಕಳುಹಿಸಿದ ಬೆತ್ತಲೆ ಫೋಟೋಗಳನ್ನು ಆತನ ಕುಟುಂಬದವರು ಹಾಗೂ ಸಹೋದ್ಯೋಗಿಗಳಿಗೆ ಕಳುಹಿಸುವುದಾಗಿ ಬೆದರಿಸಿದ ಆಕೆ 8 ಕೋಟಿ ಹಣ ಪಾವತಿ ಮಾಡುವಂತೆ ಹೇಳಿದ್ದಾಳೆ.
ಇತ್ತ ಮರ್ಯಾದೆಗೆ ಅಂಜಿದ ಬ್ಯಾಂಕ್ ಸಿಇಒ ಮೊದಲಿಗೆ 5 ಲಕ್ಷ ರೂಪಾಯಿಯನ್ನು ನೀಡಿದ್ದಾನೆ. ಇದಾದ ನಂತರ ನಿರಂತರವಾಗಿ ಬ್ಲಾಕ್‌ಮೇಲ್‌ಗಳು ನಡೆಯುತ್ತಲೇ ಇದ್ದು, ಒಟ್ಟು 108 ಇನ್ಸ್ಟಾಲ್‌ಮೆಂಟ್‌ನಲ್ಲಿ ಒಟ್ಟು 4 ಕೋಟಿ 39 ಲಕ್ಷ ರೂಪಾಯಿಗಳನ್ನು ಆಕೆಗೆ ನೀಡಿದ್ದಾನೆ. ಇಷ್ಟೊಂದು ಮೊತ್ತದ ಹಣ ಒಟ್ಟು ಸೇರಿಸುವುದಕ್ಕಾಗಿ ಆತ ತನ್ನ ಹೆಸರಿನಲ್ಲಿದ್ದ ಒಂದು ಫ್ಲಾಟ್ ಮಾರಾಟ ಮಾಡಿದ್ದಲ್ಲದೆ ತನ್ನ ಉಳಿತಾಯ ನಿಧಿ ಖಾತೆಯ ಹಣವನ್ನು ಡ್ರಾ ಮಾಡಿ ನೀಡಿದ್ದಾನೆ. ಇದರ ಜೊತೆಗೆ ಹಲವು ಬ್ಯಾಂಕ್‌ಗಳು ಹಾಗೂ ಬೇರೆ ಬೇರೆ ವ್ಯಕ್ತಿಗಳಿಂದ ಸಾಲ ಪಡೆದು ಆಕೆಗೆ ನೀಡಿದ್ದಾರೆ.
ಆದರೆ ಇಷ್ಟೊಂದು ಮೊತ್ತದ ಹಣ ಪಡೆದ ಮೇಲೂ ಮಹಿಳೆಯ ಧನದಾಹ ನಿಲ್ಲದೆ ಬ್ಲಾಕ್‌ಮೇಲ್ ಮಾಡುತ್ತಲೇ ಇದ್ದಳು. ಪರಿಣಾಮ ನಿವೃತ್ತ ಬ್ಯಾಂಕ್ ಸಿಇಒ ವಿಧಿಯಿಲ್ಲದೇ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಇತ್ತೀಚೆಗೆ ಆಕೆ ಮತ್ತೆ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ಸಿಇಒ ಪೊಲೀಸರ ಮೊರೆ ಹೋಗಿದ್ದಾರೆ. ಮಹಿಳೆಗೆ ಒಂದು ಲಕ್ಷ ಸದ್ಯಕ್ಕೆ ನೀಡುವುದಾಗಿ ಬ್ಯಾಂಕ್ ಸಿಇಒ ಮೂಲಕವೇ ಆಕೆಯನ್ನು ಕರೆಸಿಕೊಂಡ ಪೊಲೀಸರು ಚಾಲಾಕಿ ಮಹಿಳೆಯನ್ನು ಬಂಧಿಸಿದ್ದು ಕಂಬಿ ಹಿಂದೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಮಹಿಳೆಯ ಜೊತೆ ಕಳೆದ ಕೆಲ ರಸನಿಮಿಷಗಳಿಗಾಗಿ ಬ್ಯಾಂಕ್ ಸಿಇಒ ಭಾರಿ ಮೊತ್ತವನ್ನು ತೆರಬೇಕಾಗಿ ಬಂದಿದೆ.