ಕ್ವಾರ್ಟರ್‌ ಮದ್ಯಕ್ಕಾಗಿ ಅಂಜಲ್‌ ಮೀನನ್ನು ಕದ್ದು ಮಾರಿದ ಭೂಪ

ಮಂಗಳೂರು/ಕಾರ್ಕಳ: ಮೀನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಅಂಜಲ್ ಮೀನು ಕಳವು ಪ್ರಕರಣ ಕಾರ್ಕಳ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಅಂಜಲ್ ಮೀನು ಮಾಲೀಕ, ಕದ್ದವನು ಮತ್ತು ತಿಂದವನ ನಡುವೆ ರಾಜಿ ಸಂಧಾನ ನಡೆದು ವಿವಾದ ಠಾಣೆಯಲ್ಲೇ ಬಗೆಹರಿದ ಕುತೂಹಲಕಾರಿ ಘಟನೆ ಕಾರ್ಕಳದಲ್ಲಿ ನಡೆದಿದೆ.

ಕಾರ್ಕಳದ ಮೀನು ಮಾರುಕಟ್ಟೆಯಲ್ಲಿ ಮಾಲಾ ಎಂಬವರು ಮೀನು ವ್ಯಾಪಾರ ಮಾಡಿಕೊಂಡಿದ್ದು, ಕಳೆದ ಜೂ.9 ರಂದು 6500 ಮೌಲ್ಯದ ಅಂಜಲ್ ಮೀನು ಕಳುವಾಗಿತ್ತು. ಸಾಣೂರಿನ ಗ್ರಾಹಕರೊಬ್ಬರು ಹುಟ್ಟು ಹಬ್ಬದ ಕಾರ್ಯಕ್ರಮಕ್ಕಾಗಿ ಮೀನು ವ್ಯಾಪಾರಿ ಮಾಲಾ ಎಂಬವರಲ್ಲಿ ದುಬಾರಿ ಬೆಲೆಯ ಅಂಜಲ್ ಮೀನು ಬುಕ್ ಮಾಡಿದ್ದರು. ಅದರಂತೆ ಮಾಲಾ ಅವರು 6500 ಸಾವಿರ ಮೌಲ್ಯದ 6.500 ಕೆ.ಜಿ ತೂಕದ ಒಂದು ಅಂಜಲ್ ಮೀನನ್ನು ಫ್ರಿಡ್ಜ್ ನಲ್ಲಿಟ್ಟಿದ್ದರು. ಮರುದಿನ ಬಂದ ಗ್ರಾಹಕ ಮೀನು ಕೊಡುವಂತೆ ಕೇಳಿದಾಗ ಫ್ರಿಡ್ಜ್ ನಲ್ಲಿದ್ದ ಅಂಜಲ್ ಮೀನು ಕಾಣೆಯಾಗಿತ್ತು. ಮೀನು ಕಳವುಗೈದ ಕಳ್ಳನ ಪತ್ತೆಗೆ ಯತ್ನಿಸಿದರೂ ಕಳ್ಳ ಪತ್ತೆಯಾಗದ ಹಿನ್ನೆಲೆಯಲ್ಲಿ ಮಾಲಾ ಅವರ ಪುತ್ರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣದ ಕುರಿತು ಅನುಮಾನದ ಮೇರೆಗೆ ಪೊಲೀಸರು ಸೂರಜ್ ಎಂಬಾತನನ್ನು ಕರೆದು ವಿಚಾರಿಸಿದಾಗ ಕುಡಿತಕ್ಕಾಗಿ ಅಂಜಲ್ ಮೀನು ಕಳವುಗೈದ ವಿಚಾರ ಒಪ್ಪಿಕೊಂಡಿದ್ದಾನೆ. ತಾನು ಕದ್ದ 6500 ರೂ ಮೌಲ್ಯದ ಅಂಜಲ್ ಮೀನನ್ನು ಒಂದು ಕ್ವಾರ್ಟರ್ ಮದ್ಯಕ್ಕಾಗಿ (ಕೇವಲ 140 ರೂಪಾಯಿ) ಮಾರ್ಕೆಟ್ ಬಳಿಯ ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಈತನ ಹೇಳಿಕೆ ಆಧರಿಸಿ ಪೊಲೀಸರು ಮೀನು ಖರೀದಿಸಿದ್ದ ಹೂವಿನ ವ್ಯಾಪಾರಿಯನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಆತ ಸತ್ಯ ಒಪ್ಪಿಕೊಂಡಿದ್ದು
ಮಾಲಾ ಅವರಿಗೆ ಅಂಜಲ್ ಮೀನಿನ ನಿಜವಾದ ಮೌಲ್ಯವನ್ನು ನೀಡಲು ಒಪ್ಪಿ ಸಧ್ಯಕ್ಕೆ 3 ಸಾವಿರ ರೂ. ಪಾವತಿಸಿ, ಉಳಿದ ಬಾಕಿ ಮೊತ್ತವನ್ನು ಜೂ.27ರಂದು ನೀಡುವುದಾಗಿ ಹೇಳಿದ್ದಾರೆ. ಬಳಿಕ, ಪೊಲೀಸರು ಮುಚ್ಚಳಿಕೆ ಬರೆಯಿಸಿಕೊಂಡು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ. ಕುಡಿತದ ಚಟ ಎಂತಹವರನ್ನೂ ಕೂಡ ದಾರಿ ತಪ್ಪಿಸುತ್ತದೆ ಎನ್ನುವುದಕ್ಕೆಅಂಜಲ್ ಮೀನು ಕಳವು ಪ್ರಕರಣ ಸಾಕ್ಷಿಯಾಗಿದೆ.

 

LEAVE A REPLY

Please enter your comment!
Please enter your name here