ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ – ಭಾಗಶಃ ಹೊತ್ತಿ ಉರಿದ ಮನೆ – ರೂ.35 ಲಕ್ಷಕ್ಕೂ ಅಧಿಕ ಹಾನಿ

ಮಂಗಳೂರು/ಉಪ್ಪಿನಂಗಡಿ: ಕೊಯಿಲ ಗ್ರಾಮದ ಕೆಮ್ಮಾರ ಶಾಲೆಯ ಬಳಿಯ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಮನೆಯ ಒಳಭಾಗ ಸಂಪೂರ್ಣವಾಗಿ ಸುಟ್ಟುಹೋಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿದೆ. ಘಟನೆ ಜೂ.30ರಂದು ಮಧ್ಯಾಹ್ನದ ವೇಳೆ ಸಂಭವಿಸಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಮ್ಮಾರ ಶಾಲಾ ಬಳಿ ನಿವಾಸಿ ದಿ.ಇಬ್ರಾಹಿಂ ಹಾಜಿ ನೀರಾಜೆ ಇವರ ಪುತ್ರ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಉರಿಯ ತೊಡಗಿ ಮನೆಯೊಳಗೆ ಆವರಿಸಿಕೊಂಡು ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಸಿಂಗ್ ಮೆಷಿನ್ ಸಹಿತ ಬಟ್ಟೆಗಳು, ಆಹಾರ ಸಾಮಾಗ್ರಿಗಳು, ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಒಟ್ಟಾರೆಯಾಗಿ ಮನೆಯ ಸುತ್ತಲಿನ ಗೋಡೆ ಬಿಟ್ಟರೆ ಮನೆ ಸಂಪೂರ್ಣವಾಗಿ ಹಾನಿಗೊಂಡಿದೆ. ಸುಮಾರು 35 ಲಕ್ಷದಷ್ಟು ನಷ್ಟ ಸಂಭವಿಸಿರುವುದಾಗಿ ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವರ್ಷದ ಹಿಂದೆ ಈ ಮನೆ ನಿರ್ಮಾಣ ಮಾಡಲಾಗಿತ್ತು. ಭಾನುವಾರ 10 ಗಂಟೆಯ ವೇಳೆಗೆ ಅಬ್ದುಲ್ ರಹಿಮಾನ್ ಮತ್ತು ಅವರ ಪತ್ನಿ ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ಬಳಿಕ 10-30ರ ವೇಳೆಗೆ ಸಹೋದರಿ ಮತ್ತು ಮಕ್ಕಳು ಕಡಬದ ಮರ್ದಾಳದಲ್ಲಿರುವ ಸಂಬಂಧಿಕರ ಮನೆಯ ಕಾರ‍್ಯಕ್ರಮಕ್ಕೆ ತೆರಳಿದ್ದರು. ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದು, ಪಕ್ಕದ ಮನೆಯವರು ಮನೆಯ ಸುತ್ತ ಹೊಗೆ ಆವರಿಸಿರುವುದನ್ನು ಗಮನಿಸಿ ಸ್ಥಳೀಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣ ಧಾವಿಸಿ ಬಂದ ಸಾಮಾಜಿಕ ಕಾರ‍್ಯಕರ್ತೆ ಸಲೀಕತ್ ಸೇರಿದಂತೆ ಇನ್ನಿತರರು ಮನೆಯ ಬಳಿ ಬಂದು ಮನೆಯೊಳಗೆ ಇದ್ದ ವಿದ್ಯುತ್ ಸಂಪರ್ಕದ ಸ್ವಿಚ್ ತೆಗೆದು ಗ್ಯಾಸ್ ಸಂಕರ್ಪ ಕಡಿತಗೊಳಿಸಿ ಅದನ್ನು ಹೊರ ಹಾಕಿ ಸಂಭವನೀಯ ಭಾರೀ ದುರಂತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಪುತ್ತೂರುನಿಂದ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದೆ.

ನಾನು ಮನೆಯ ಒಳಗಡೆ ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ಸಣ್ಣಗೆ ಮಳೆ ಬರುತ್ತಿತ್ತು, ಭಾರೀ ಸಿಡಿಲು ಬಡಿದ ಶಬ್ದವೊಂದು ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣದ ರೀತಿಯಲ್ಲಿ ಹೊಗೆ ಆವರಿಸಿಕೊಂಡಿತ್ತು. ಹೇಗೋ ಮನೆಯಿಂದ ಹೊರ ಬಂದೆ. ಅಲ್ಲಾಹು ನನ್ನ ಪ್ರಾಣವನ್ನು ಉಳಿಸಿದ ಎಂದು ಅಬ್ದುಲ್ ರಹಿಮಾನ್ ತಾಯಿ ಸಕೀನ ಅಳುತ್ತಲೇ ಘಟನೆಯ ಕುರಿತು ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here