ಮಂಗಳೂರು ನಗರದಲ್ಲಿ ಮತ್ತೊಂದು ದರೋಡೆ ಪ್ರಕರಣ – ವೃದ್ಧರಿಗೆ ಹಲ್ಲೆ ಮಾಡಿ ಕೂಡಿಹಾಕಿ ಕಾರಿನೊಂದಿಗೆ ಪರಾರಿಯಾದ ಕಳ್ಳರ ತಂಡ

ಮಂಗಳೂರು: ಮಂಗಳೂರು ನಗರದಲ್ಲಿ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಬಿಜೈ ಕಾಪಿಕಾಡ್ ಬಳಿಯ ದಡ್ಡಲ್ ಕಾಡು ಬಳಿ ಇಂದು(ಜು.9) ಬೆಳಗ್ಗಿನ ಜಾವ ಈ ದರೋಡೆ ನಡೆದಿದೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸುಮಾರು 3.30ರ ಸುಮಾರಿಗೆ ಈ ದರೋಡೆ ಕೃತ್ಯ ನಡೆದಿದೆ. ಮನೆಯಲ್ಲಿದ್ದ ವೃದ್ದರನ್ನು ಕೂಡಿ ಹಾಕಿ ಹಲ್ಲೆ ನಡೆಸಿ ದರೋಡೆ ಮಾಡಿ ಬಳಿಕ ಮನೆ ಮಾಲೀಕರ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಮನೆ ಮಾಲೀಕ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಂಡದಲ್ಲಿ 4 ಮಂದಿ ದರೋಡೆಕೋರು ಇದ್ದರೆಂದು ತಿಳಿದು ಬಂದಿದೆ. ಈ ಮನೆಯಲ್ಲಿ ಇಬ್ಬರು ವೃದ್ದರಿದ್ದು ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಮನೆಯವರಿಗೆ ಮಾರಕಾಯುಧ ತೋರಿಸಿ, ಹಲ್ಲೆ ನಡೆಸಿ, ಬೆದರಿಸಿ ದರೋಡೆ ಕೃತ್ಯ ನಡೆಸಲಾಗಿದೆ. ಬಳಿಕ ಮನೆಯ ಕಾರಿನ ಕೀ ಪಡೆದು ಅದೇ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ.

ಹೆಜಮಾಡಿ ಟೋಲ್ ಗೇಟ್ ಸಮೀಪ ಕಾರು ನಿಲ್ಲಿಸಿ ಪರಾರಿಯಾಗಿದ್ದಾರೆ. ಉರ್ವ ಪೊಲೀಸರು, ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೇ ಪೊಲೀಸರು ದರೋಡೆಗೈದ ಮನೆಯ ಸುತ್ತಮುತ್ತಲಿನ ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮೆರಾಗಳ‌ ಫೂಟೇಜ್ ಪರಿಶೀಲನೆ ನಡೆಸುತ್ತಿದ್ದು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಕಾರಿನೊಳಗೆ ಮೊಬೈಲೊಂದು ಪತ್ತೆಯಾಗಿದ್ದು ಇದು ಯಾರ ಮೊಬೈಲ್‌ ಎಂದು ತಿಳಿದು ಬಂದಿಲ್ಲ.

ಇನ್ನೊಂದೆಡೆ ನಗರದ ಪಂಪ್ವೆಲ್‌ ಕಪಿತಾನಿಯೋ ಶಾಲೆಯ ಬಳಿ ಹಮ್ಮಬ್ಭ ಎಂಬವರಿಗೆ ಸೇರಿದ ಬಿ‌ ಎಚ್ ಸ್ಟೋರ್‌ ಗೆ ನುಗ್ಗಿದ ಇಬ್ಬರು ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದ್ದು ಕಂಕನಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೂ.21ರಂದು ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಉಳಾಯಿಬೆಟ್ಟುವಿನ ಗುತ್ತಿಗೆದಾರ ಪದ್ಮನಾಭ್‌ ಕೋಟ್ಯಾನ್‌ ಮನೆಗೆ 9 ಮಂದಿ ದರೋಡೆಕೋರರು ಪ್ರವೇಶಿಸಿ ಮನೆಮಂದಿಗೆ ಹಲ್ಲೆ ನಡೆಸಿ ನಗ ನಗದು ದೋಚಿ ಇದೇ ಮಾದರಿ ಮನೆ ಮಾಲೀಕನ ಕಾರಿನಲ್ಲಿ ಪರಾರಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಮಂದಿ ದರೋಡೆಕೋರರನ್ನು ಬಂಧಿಸಲಾಗಿದೆ. ಇನ್ನುಳಿದಂತೆ 5 ಮಂದಿ ತಲೆಮರೆಸಿಕೊಂಡಿದ್ದು ಇನ್ನೂ ಬಂಧನವಾಗಿಲ್ಲ. ನಗ ನಗದು ಪತ್ತೆಯಾಗಿಲ್ಲ.

LEAVE A REPLY

Please enter your comment!
Please enter your name here