ಬೆಂಕಿ ನಂದಿಸಲು ಬರಲಿವೆ ರೋಬೋಟ್​ಗಳು – ಅಗ್ನಿಶಾಮಕ ದಳ ಸೇರಲಿರುವ 10 ರೋಬೋಟ್

ಮಂಗಳೂರು/ಬೆಂಗಳೂರು: ಅಗ್ನಿ ಅವಘಡಗಳು ಸಂಭವಿಸಿದಾಗ ಅನೇಕ ಬಾರಿ ಅಗ್ನಿಶಾಮಕ ದಳದ ಸಿಬ್ಬಂದಿ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ತೆರಳಲು ಸಾಧ್ಯವಾಗದೇ ಇರುವುದೇ ಅನಾಹುತವನ್ನು ತಡೆಯುವಲ್ಲಿ ಕಷ್ಟಕರವಾಗಿ ಪರಿಣಮಿಸುತ್ತದೆ. ಇಂಥ ಸಂದರ್ಭಗಳಲ್ಲಿ ಯಂತ್ರ ಮಾನವರಾದ ರೋಬೋಟ್​ಗಳು ನೆರವಾಗಬಲ್ಲವು. ಹೀಗಾಗಿ ಇದರ ಪ್ರಯೋಜನ ಪಡೆಯಲು ರಾಜ್ಯ ಅಗ್ನಿಶಾಮಕದಳ ಮುಂದಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿಗೆ ಬೆಂಕಿ ನಂದಿಸಲು ರೋಬೋಟ್​ಗಳು ಬರಲಿವೆ. 

ಬೆಂಗಳೂರು ನಗರದಲ್ಲಿ ಸಾಕಷ್ಟು ಬಾರಿ ಅಗ್ನಿ ಅವಘಡಗಳು ಸಂಭವಿಸಿದಾಗ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಿರಿದಾದ ರಸ್ತೆಗಳು, ಗೋಡೌನ್, ಬೇಸ್‌ಮೆಂಟ್, ಬಹುಮಹಡಿಗಳು ಸೇರಿದಂತೆ ಕೆಲವು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲು ಕಷ್ಟಪಡಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರೋಬೋಟ್ ಬಳಕೆ ಮಾಡಿಕೊಂಡು ಬೆಂಕಿ ನಂದಿಸಬಹುದು. ಸಿಬ್ಬಂದಿ ತೆರಳಲು ಸಾಧ್ಯವಾಗದಂಥ ಸ್ಥಳಗಳಿಗೆ ರಿಮೋಟ್ ಕಂಟ್ರೋಲ್ ರೋಬೋಟ್ ಬಳಸಿಕೊಂಡು ಬೆಂಕಿ ಕಾರ್ಯಾಚರಣೆ ಮಾಡಬಹುದಾಗಿದೆ. ಇದೀಗ ಬೆಂಗಳೂರು ಅಗ್ನಿಶಾಮಕ ದಳದವರೂ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಹತ್ತು ರೋಬೋಟ್​​ಗಳನ್ನು ಖರೀದಿ ಮಾಡಲು ಅಗ್ನಿಶಾಮಕ ದಳ ಮುಂದಾಗಿದೆ. ಈಗಾಗಲೇ ದೆಹಲಿ, ಮುಂಬೈ, ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳ ಅಗ್ನಿ ಶಾಮಕ ದಳಗಳಲ್ಲಿ ರೋಬೋಟ್​​ಗಳಿದ್ದು ಅವು ದುರ್ಗಮ ಸ್ಥಳಗಳಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಕೂಡ ಆಗಿವೆ.

ಈ ರೋಬೋಟ್‌ನಲ್ಲಿ ಅಗ್ನಿ ನಿರೋಧಕ ಹೊದಿಕೆ, ವಾಟರ್ ಚೆಟ್, ಚಿಕ್ಕ ಗಾಲಿಗಳು, ಚೈನ್ ವ್ಯವಸ್ಥೆ ಇರಲಿದೆ. ಎಲೆಕ್ಟ್ರಾನಿಕ್ ಸರ್ವೈಲೆನ್ಸ್ ಕ್ಯಾಮರಾದ ಕಣ್ಣು ಇರಲಿದ್ದು, ಘಟನಾ ಸ್ಥಳದ ಚಿತ್ರವನ್ನು ಸೆರೆ ಹಿಡಿದು ಕಂಟ್ರೋಲ್ ಯೂನಿಟ್‌ಗೆ ರವಾನಿಸಲಿದೆ. ದಿಢೀರ್ ಅಗ್ನಿ ಅವಘಡಗಳ ವೇಳೆ ಹೆಚ್ಚಿನ ಜೀವಹಾನಿ ತಪ್ಪಿಸಲು ಹಾಗೂ ಸಿಬ್ಬಂದಿ ನಿಖರವಾಗಿ ಕಾರ್ಯನಿರ್ವಹಿಸಲು ಈ ರೋಬೋಟ್ ನೆರವಾಗಲಿದೆ. ಈ ರೋಬೋಟ್​​ಗಳು ಸುಮಾರು 100 ಅಡಿ ದೂರದಿಂದ ನೀರು ಸಿಂಪಡಿಸುವ ಸಾಮರ್ಥ್ಯ ಹೊಂದಿವೆ. ಜೆಟ್ ಮುಖಾಂತರ ಕೇವಲ ನೀರು ಮಾತ್ರವಲ್ಲದೆ, ನೊರೆ, ವಿವಿಧ ದ್ರಾವಣಗಳನ್ನು ಸಿಂಪಡಿಸಬಹುದಾಗಿದೆ.

LEAVE A REPLY

Please enter your comment!
Please enter your name here