ಮಂಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ಶಾಸಕ ಭರತ್ ಶೆಟ್ಟಿ ಮತ್ತು ಬಿಜೆಪಿಯ ಕೀಳುಮಟ್ಟದ ರಾಜಕೀಯ ಖಂಡಿಸಿ ಮಂಗಳೂರು ನಗರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು(ಜು.10) ಮಂಗಳೂರು ಮಹಾನಗರಪಾಲಿಕೆ ಕಚೇರಿಯ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.
ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಭರತ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರು ಭರತ್ ಶೆಟ್ಟಿ ಹಾಗೂ ಬಿಜೆಪಿಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್ ಗಾಂಧಿಯ ನೈಜ್ಯ ಹೇಳಿಕೆಯನ್ನು ಬದಿಗಿಟ್ಟು ಕೇವಲ ಪ್ರಧಾನಿ ಮೋದಿ ಹಾಗೂ ಬಿಜೆಪಿ ಬಗ್ಗೆ ನೀಡಿದ ಹೇಳಿಕೆಯನ್ನು ಪ್ರಚಾರ ಮಾಡಲಾಗುತ್ತಿದೆ. ಸಂಸತ್ ನಲ್ಲಿ ರಾಹುಲ್ ಗಾಂಧಿಯ ಭಾಷಣಕ್ಕೆ ಉತ್ತರ ಕೊಡಲಾಗದೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ಸಂಸದರೇ ಮೌನಕ್ಕೆ ಶರಣಾಗಿದ್ರು. ಆದ್ರೆ ಇಲ್ಲಿ ತಮ್ಮ ನಾಯಕನ ಕಳಪೆ ಸಾಧನೆ ಹಾಗೂ ಬೆಲೆ ಏರಿಕೆ ವಿಚಾರ, ನೀಟ್ ಹಗರಣ ಮೊದಲಾದ ವಿಚಾರವನ್ನು ಮುಚ್ಚಿ ಹಾಕಲು ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾರ್ ಸೋ ಪಾರ್ ಅಂದವರು ಇಂದು 240 ಕ್ಕೆ ಕುಸಿದಿದ್ದು, ಹಿಂದುತ್ವ ನಮ್ಮ ಕೈ ಬಿಟ್ಟು ಹೋಗುತ್ತಿದೆ ಎಂದು ಬಿಜೆಪಿಗರು ಆತಂಕಗೊಂಡಿದ್ದಾರೆ. ಹೀಗಾಗಿ ಹಿಂದೂ ಹಿಂದೂ ಅಂತ ಬೊಬ್ಬೆ ಹೊಡೆಯುತ್ತಾ ಇಲ್ಲದ ಹೇಳಿಕೆಯನ್ನು ಇದೆ ಎಂದು ಬಿಂಬಿಸಿ ಈ ರೀತಿ ಮಾತನಾಡುತ್ತಿದ್ದಾರೆ. ಬಿಜೆಪಿ ಹಿಂದೂ ಸಮಾಜದ ವಿರೋಧಿ ಕೆಲಸದಿಂದಲೇ ಇಂದು ಇಂತಹ ಹೀನ ಸ್ಥಿತಿಗೆ ಬಂದು ತಲುಪಿದೆ. ಭಾರತ್ ಅಕ್ಕಿ ಎಲ್ಲಿ ಹೋಗಿದೆ ಎಂದು ಪ್ರಶ್ನೆ ಮಾಡಿದ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ಈ ಬಗ್ಗೆ ಮಾತನಾಡಲು ನಿಮಗೆ ಸಾದ್ಯವಾಗಿಲ್ಲ. ಭಾರತ್ ಅಕ್ಕಿ ಬಡ ಹಿಂದೂಗಳಿಗೆ ಸಿಗ್ತಾ ಇತ್ತು. ನೀಟ್ ಪರೀಕ್ಷೆಯಲ್ಲಿ ಬಡ ಹಿಂದೂ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಆದರೆ ಬಿಜೆಪಿಯ ನಾಯಕರಿಗೆ ಇದರ ಬಗ್ಗೆ ಮಾತನಾಡಲು ಧೈರ್ಯ ಇಲ್ಲ. ಈ ಬಗ್ಗೆ ರಾಹುಲ್ ಗಾಂಧಿ ಸಂಸತ್ ನಲ್ಲಿ ಇದ್ದ ಮೋದಿ, ಷಾ, ಸೇರಿದಂತೆ ಹೋಲ್ಸೇಲ್ ಗಿರಾಕಿಗಳ ಮುಂದೆ ಮಾತನಾಡಿದ್ದಾರೆ. ನೀವು ಚಿಲ್ಲರೆ ಗಿರಾಕಿ, ನೀವು ರಾಹುಲ್ ಗಾಂಧಿಗೆ ಯಾವ ಲೆಕ್ಕಾ ಎಂದು ಭರತ್ ಶೆಟ್ಟಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಭರತ್ ಶೆಟ್ಟಿ ಒಂದು ವೇಳೆ ನನ್ನ ಮುಂದೆ ಬಂದರೆ ನಮ್ಮ ಮಹಿಳಾ ಕಾರ್ಯಕರ್ತರು ಸೇರಿ ಚಪ್ಪಲಿ ಹಾರ ಹಾಕುವುದಾಗಿ ಹೇಳಿದರು.
ಕಾರ್ಯಕರ್ತರು ಮಂಗಳೂರು ಮಹಾನಗರಪಾಲಿಕೆ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರಿಂದ ಲಾಲ್‌ಭಾಗ್ ಸರ್ಕಲ್ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರತಿಭಟನೆಯಲ್ಲಿ ನಿರತರಾಗಿದ್ದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಅಲ್ಲಿಂದ ಪಕ್ಕಕ್ಕೆ ಸರಿಸುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನೆಯಲ್ಲಿ ಎಂ ಎಲ್‌ಸಿ ಐವನ್ ಡಿಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರುಗಳಾದ ಸುರೇಶ್ ಬಲ್ಲಾಳ್, ಶಶಿಧರ ಹೆಗ್ಡೆ , ಪ್ರಕಾಶ್ ಸಾಲಿಯಾನ್, ಮಹಿಳಾ ನಾಯಕಿಯರು, ಸೇರಿದಂತೆ ಪಕ್ಷದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.