ಮಂಗಳೂರು/ತಮಿಳುನಾಡು: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಒಂದು ಮಾತಿದೆ. ಆದ್ರೆ ಈ ಗಾದೆ ಮಾತೇನಾದ್ರೂ ಒಂದು ಸುಳ್ಳು ಹೇಳಿ, ಸಾವಿರ ಮದುವೆ ಆಗು ಅಂತ ಆಗೋಕೆ ಸಾಧ್ಯಾನಾ? ಎನ್ನುವ ಪ್ರಶ್ನೆಯ ನಡುವೆ ಮಹಿಳೆಯೊಬ್ಬರು ಸುಳ್ಳು ಹೇಳಿ 50 ಬಾರಿ ಮದುವೆಯಾಗಿದ್ದಾರೆ.
ಈ ಘಟನೆ ನಡೆದಿರುವುದು ನಮ್ಮ ನೆರೆಯ ರಾಜ್ಯ ತಮಿಳುನಾಡಿನಲ್ಲಿ. ತಿರುಪ್ಪೂರು ನಿವಾಸಿಯಾಗಿರೋ ಸಂಧ್ಯಾ, ಈ ಘನಕಾರ್ಯ ಮಾಡಿರೋ ಮಹಾತಾಯಿ. ಅಷ್ಟಕ್ಕೂ ಈ ಮಹಿಳೆ ಮೋಸ ಮಾಡಿ ಮದುವೆಯಾಗಿರೋದು ಯಾವುದೇ ಸಾಮಾನ್ಯ ವ್ಯಕ್ತಿಗಳನಲ್ಲ. ಅಸಲಿಗೆ ಈಕೆಯ ಹಾಫ್ ಸೆಂಚುರಿ ಮ್ಯಾರೇಜ್ನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಅನೇಕ ಇನ್ಸ್ಪೆಕ್ಟರ್ಗಳೂ ಇದ್ದಾರಂತೆ.
ಅಷ್ಟಕ್ಕೂ ಈಕೆಯ ಮದುವೆ ಆಟ ಬಯಲಾಗಿದ್ದೇ ಈಕೆ ಕಟ್ಟಿಕೊಂಡಿರೋ ಓರ್ವ ಪತಿಯಿಂದಲೇ. ತಿರುವೂರ್ ಗ್ರಾಮದ ಓರ್ವ ಈಕೆಯನ್ನು ಮದುವೆಯಾಗಿದ್ದ. ಆದ್ರೆ ಮದುವೆಯಾದ ಮೂರೇ ತಿಂಗಳಿಗೆ ಈಕೆಯ ವರ್ತನೆ ಹಾಗೂ ನಡವಳಿಕೆಯಲ್ಲಿ ಚೇಂಜಸ್ ಕಾಣಿಸ್ತಂತೆ. ಹಾಗಾಗಿ ಈಕೆಯ ಬಗ್ಗೆ ಅನುಮಾನಗೊಂಡ ಪತಿರಾಯ ಈಕೆಯ ಬ್ಯಾಕ್ಗ್ರೌಂಡ್ ಪತ್ತೆ ಹಚ್ಚೋಕೆ ಮುಂದಾಗಿದ್ದಾನೆ. ಆಕೆಯ ಆಧಾರ್ ಕಾರ್ಡ್ ನೋಡಿ ಒಂದು ಕ್ಷಣಕ್ಕೆ ಆತನಿಗೂ ದಂಗಾಗಿದೆ. ಯಾಕಂದ್ರೆ ಈಕೆಯ ಆಧಾರ್ ಕಾರ್ಡ್ನಲ್ಲಿ ಪತಿಯ ಹೆಸರಿನ ಜಾಗದಲ್ಲಿ ಬೇರೆ ವ್ಯಕ್ತಿಯ ಹೆಸರಿರೋದು ಪತ್ತೆಯಾಗಿದೆ. ಇಷ್ಟಾದ ಮೇಲೆ ಯಾವ ಗಂಡ ತಾನೆ ಸುಮ್ಮನೆ ಇರೋಕೆ ಸಾಧ್ಯ? ಆಗಲೇ ಈ ವ್ಯಕ್ತಿ ಪೊಲೀಸರ ಮೊರೆ ಹೋಗಿ ಕಂಪ್ಲೇಂಟ್ ಕೊಟ್ಟಿದ್ದಾನೆ.
ಆಗ ಈಕೆಯ ಮದುವೆಯ ಕಥೆ ಹೊರಬಿದ್ದಿದೆ. ಆರಂಭದಲ್ಲಿ ಈಕೆ 50 ಮದುವೆ ಆಗಿದ್ದಾಳೆ ಅಂತ ಆತನಿಗೂ ಗೊತ್ತಿರಲಿಲ್ಲವಂತೆ. ಆದರೆ ಅಗೆದಂತೆ ಆಕೆಯ ಮದುವೆ ಕಥೆ ಬಹಿರಂಗಗೊಂಡಿದೆ. ಒಂದು, ಎರಡು, ಮೂರು… ಹೀಗೆ ಮುಂದುವರಿದು 50ಕ್ಕೆ ತಲುಪಿದೆ. ಈ ಗ್ರೇಟ್ ತಮಿಳುನಾಡು ಮ್ಯಾರೇಜ್ ಸ್ಟೋರಿ ಬಯಲಾದ ಮೇಲೆ ಪೊಲೀಸರು ಈಕೆಯನ್ನು ಕರೆಸಿ. ಯಾಕಮ್ಮಾ ಹಿಂಗ್ ಮಾಡ್ದೆ ಅಂತ ಕೇಳಿದ್ರೆ ಈಕೆ ಕೊಟ್ಟ ಉತ್ತರವೇ ಹಣ ಮತ್ತು ಆಭರಣಕ್ಕಾಗಿ ಅಂತ. ಆನ್ಲೈನ್ನಲ್ಲಿ ಭೇಟಿ ಮಾಡೋದು, ಸಲುಗೆ ಬೆಳೆಸಿಕೊಳ್ಳೋದು, ಆಮೇಲೆ ಮದುವೆ ನಾಟಕ ಆಡಿ ಕೈಕೊಟ್ಟು, ಬೇರೆ ಮಿಕ ಹುಡುಕೋದು ಇದೆಲ್ಲವನ್ನೂ ಆಕೆ ಬಾಯ್ಬಿಟ್ಟಿದ್ದಾಳೆ.
ಮದುವೆ ಅನ್ನೋದು ಪ್ರತಿಯೊಬ್ಬರ ಕನಸು. ಆದರೆ ಈ ಸಂಧ್ಯಾಳಿಗೆ ಇದೊಂದು ಹವ್ಯಾಸ. ನಾರಿ ಕುಲಕ್ಕೆ ಇದು ಅವಮಾನ ಎನ್ನುವ ಮಟ್ಟಿಗೆ ಮಹಿಳೆಯರು ಮೂಗು ಮುರಿಯುತ್ತಿರುವುದಂತೂ ಸತ್ಯ.