ಮಂಗಳೂರು/ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮೂರನೇ ಅವಕಾಶ ನೀಡಿದೆ.
ಎಸ್ಎಸ್ಎಲ್ಸಿ ಮೂರನೇ ಪರೀಕ್ಷೆಯ ನೋಂದಣಿಗೆ ಅವಕಾಶ ನೀಡಲಾಗಿದ್ದು ಅಭ್ಯರ್ಥಿಗಳು 2024ರ ಜು.17ರೊಳಗಾಗಿ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆಗಸ್ಟ್ 2ರಿಂದ 9ರವರೆಗೆ ಎಸ್ಎಸ್ಎಲ್ಸಿ ಮೂರನೇ ಪರೀಕ್ಷೆಯು ನಡೆಯಲಿದೆ. 2022-23ನೇ ಸಾಲಿನಲ್ಲಿಯೂ ಅನುತ್ತೀರ್ಣರಾದ, 2023-24ನೇ ಸಾಲಿನ ಮೊದಲ ಹಾಗೂ ದ್ವಿತೀಯ ಪರೀಕ್ಷೆಗೆ ಗೈರಾದವರು, ತೇರ್ಗಡೆ ಹೊಂದಲು ಸಾಧ್ಯವಾಗದವರು ಕೂಡ ಮೂರನೇ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇನ್ನು, ಕಳೆದ ಪರೀಕ್ಷೆಗಳಲ್ಲಿ ಪಡೆದ ಅಂಕಗಳಿಂದ ಸಮಾಧಾನಗೊಳ್ಳದವರು, ಇನ್ನೂ ಹೆಚ್ಚಿನ ಅಂಕ ಪಡೆಯಬೇಕು ಎನ್ನುವವರು ಕೂಡ ಮೂರನೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
https://kseab.karnataka.gov.in ಗೆ ಲಾಗಿನ್ ಆಗುವ ಮೂಲಕ ಪರೀಕ್ಷೆ-3ಕ್ಕೆ ನೋಂದಣಿ ಮಾಡಬಹುದಾಗಿದೆ. ಶಾಲಾ ಲಾಗಿನ್ ನಲ್ಲಿ Registration for 2024 Exam-3ನ್ನು ಕ್ಲಿಕ್ ಮಾಡಿದಾಗ ENTER REGISTER NUMBER ಎನ್ನುವ ಆಯ್ಕೆ ದೊರಕುತ್ತದೆ. ಈ ಆಯ್ಕೆಯಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ನಮೂದು ಮಾಡಲು ಅವಕಾಶ ನೀಡಲಾಗಿದೆ.