ಮಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೆ ಅವರ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿರುವ ಶಾಸಕ ಡಾ.ಭರತ್ ಶೆಟ್ಟಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು. ಅವಿಭಜಿತ ದ.ಕ. ಜಿಲ್ಲೆಯ ಪುರಾಣ ಪುರುಷ ಪರಶುರಾಮನ ಕಂಚಿನ ಮೂರ್ತಿಯ ಬದಲಿಗೆ ಕಾರ್ಕಳದಲ್ಲಿ ಆಗಿನ ಬಿಜೆಪಿ ಸಚಿವರು ಫೈಬರ್ ಮೂರ್ತಿ ಸ್ಥಾಪಿಸಿದ್ದು, ಹಿಂದೂಗಳ ಭಾವನೆಗೆ ಧಕ್ಕೆ ಅಲ್ಲವೇ? ಎಂಬುದಕ್ಕೆ ಉತ್ತರ ನೀಡಿ ಎಂದು ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್ ಸವಾಲು ಹಾಕಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜು.11ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಡಾ.ಭರತ್ ಶೆಟ್ಟಿಗೆ ಪ್ರಶ್ನೆಗೆ ಸುರಿಮಳೆಗೈದಿರುವ ವಿನಯರಾಜ್, ತುಳುನಾಡಿನ ಆರಾಧ್ಯ ದೈವ ಶಿವಧೂತ ಗುಳಿಗೆ ಬಗ್ಗೆ ಬಿಜೆಪಿಯ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಗುಳಿಗೆ ಎಂದರೆ ನಮ್ಮ ಕಡೆ ಮಾತ್ರೆ ಎಂದು ಅವಹೇಳನ ಮಾಡಿದಾಗ ನಾಲಗೆ ಯಾಕೆ ಹರಿಬಿಟ್ಟಲ್ಲ ಎಂದು ಪ್ರಶ್ನಿಸಿದರು. ಸಭಾಪತಿ ಯು.ಟಿ.ಖಾದರ್ ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎನ್ನುತ್ತಾ ನಮ್ಮ ಊರಿನ ದೈವ ಮಾತನಾಡುವ ಭಾಷೆ ತುಳು ಎಂದಾಗ ಬಿಜೆಪಿ ಮಂತ್ರಿ ಮಾಧುಸ್ವಾಮಿ ನಿಮ್ಮ ಕಡೆ ದೈವಗಳು ಮಾತನಾಡುತ್ತವೆಯೇ ಎಂದು ತಮಾಷೆ ಮಾಡಿದಾಗ ಯಾಕೆ ಮಾತನಾಡಿಲ್ಲ? ಯಕ್ಷಗಾನದಲ್ಲಿ ಗಣಪತಿ ದೇವರ ಬಗ್ಗೆ ತಮಾಷೆ ಮಾಡಿದಾಗ ಮಾತನಾಡದ ಡಾ.ಭರತ್ ಶೆಟ್ಟಿ, ಕೊರೋನ ಸಂದರ್ಭದಲ್ಲಿ ವಾಮಂಜೂರು ಸ್ಮಶಾನದಲ್ಲಿ ಹಿಂದೂ ಮಹಿಳೆಯ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದಾಗ ಹಿಂದೂಗಳ ಬಗೆಗಿನ ಕಾಳಜಿ ಮರೆತು ಹೋಗಿತ್ತೇ ಎಂದು ಪ್ರಶ್ನಿಸಿದ್ದಾರೆ.
ಕದ್ರಿ ದೇವಸ್ಥಾನದ ಹುಡಿ ಹಣವನ್ನು ಅಲ್ಲಿನ ಆಡಳಿತ ಮಂಡಳಿಯ ಬಿಜೆಪಿ ಸದಸ್ಯರ ಮೇಲೆ ಕಳವು ಮಾಡಿದ ಘಟನೆ ನಡೆದಾಗ ಯಾಕೆ ಮಾತನಾಡಿಲ್ಲ, ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲು ತಡೆದಾಗ ಯಾಕೆ ಮಾತನಾಡಿಲ್ಲ. ನಾರಾಯಣ ಗುರುಗಳ ಪಠ್ಯವನ್ನು ಪಠ್ಯಪುಸ್ತಕದಿಂದ ಕಿತ್ತೆಸೆದಾಗ ಯಾಕೆ ಮಾತನಾಡಿಲ್ಲ. ಹಿಂದೂ ಶಾಸಕನಾಗಿ ಈ ಸಂದರ್ಭ ತನ್ನ ಸಂಸ್ಕೃತಿಯನ್ನು ಮರೆತಂತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಭರತ್ ಶೆಟ್ಟಿ ಉತ್ತರಿಸಬೇಕು ಎಂದು ಒತ್ತಾಯಿಸಿದ ವಿನಯರಾಜ್, ಮುಂದೆ ಈ ರೀತಿ ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಟ್ಟರೆ ಅದಕ್ಕೆ ತಕ್ಕ ಉತ್ತರವನ್ನು ಪಕ್ಷದ ಕಾರ್ಯಕರ್ತರು ನೀಡಲಿದ್ದಾರೆ ಎಂದು ಹೇಳಿದರು. ವಿಪಕ್ಷ ನಾಯಕನನ್ನು ಛಾಯಾ ಪ್ರಧಾನಿ ಎನ್ನಲಾಗುತ್ತದೆ. ಆದರೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ವಿಶ್ವಾಸ ಇಲ್ಲದ ಪಕ್ಷವಾದ ಬಿಜೆಪಿ ಅದನ್ನು ಮರೆತಿದೆ. ಕೇವಲ ಮಾತಿನಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರೆ ಸಾಲದು, ಕೃತಿಯಲ್ಲೂ ತೋರಿಸಬೇಕು. ರಾಹುಲ್ ಗಾಂಧಿ ಸಂಸತ್ತಿನಲ್ಲಿ ಆಡಿರುವ ಮಾತನ್ನು ಜಗದ್ಗುರು ಶಂಕರಾಚಾರ್ಯ ಮಠದ ಸ್ವಾಮೀಜಿಗಳು, ಚಿಂತಕರು ಎಲ್ಲರೂ ಸ್ವಾಗತಿಸಿದ್ದಾರೆ. ಆದರೆ ಅವರು ಹೇಳಿರುವ ಮಾತನ್ನು ತಿರುಚಿ ರಾಜಕೀಯಕ್ಕಾಗಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಡಾ.ಭರತ್ ಶೆಟ್ಟಿ ಪ್ರತಿಭಟನೆಯ ವೇಳೆ ತಾನು ಒಬ್ಬ ಸುಸಂಸ್ಕೃತ ಕುಟುಂಬದ ವೈದ್ಯ ಎನ್ನುವುದನ್ನು ಮರೆತು ಅನಾಗರಿಕ ಭಾಷೆಯನ್ನು ಆಡಿದ್ದಾರೆ ಎಂದು ಹೇಳಿದರು. ಹಿಂದೂ ಧರ್ಮದ ರಕ್ಷಣೆ ಎನ್ನುವ ಡಾ.ಭರತ್ ಶೆಟ್ಟಿ ಶಸ್ತ್ರಾಸ್ತ್ರವನ್ನು ಉಪಯೋಗಿಸುವ ಪಾಠವನ್ನು ಯುವಕರಿಗೆ ನೀಡುತ್ತಿದ್ದಾರೆ. ಸಮಾಜದಲ್ಲಿ ಈ ರೀತಿ ಭಯದ ವಾತಾವರಣ ಸೃಷ್ಟಿಸುವ ನೀವು ಜನಪ್ರತಿನಿಧಿಯಾಗಿರಲು ಅನರ್ಹರು ಎಂದು ವಿನಯರಾಜ್ ಕಟುವಾಗಿ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪ್ರವೀಣ್ ಚಂದ್ರ ಆಳ್ವ, ಪ್ರಕಾಶ್ ಸಾಲ್ಯಾನ್, ನೀರಜ್ ಪಾಲ್, ಅನಿಲ್ ಪೂಜಾರಿ, ಮಂಜುಳಾ ನಾಯಕ್, ಸಲೀಂ, ಚೇತನ್, ರಾಕೇಶ್ ದೇವಾಡಿಗ, ರೂಪಾ ಚೇತನ್, ಚಂದ್ರಕಲಾ ಜೋಗಿ, ಸುಕ್ವಿಂದರ್ ಸಿಂಗ್, ವಿಕಾಸ್ ಶೆಟ್ಟಿ, ಪ್ರೇಮನಾಥ್ ಬಳ್ಳಾಲ್, ಲಕ್ಷ್ಮಣ್ ಉಪಸ್ಥಿತರಿದ್ದರು.