ಕಂಬಳದ ಕೋಣ ಓಡಿಸುವ ಶ್ರೀನಿವಾಸ ಗೌಡ ಆಭರಣಕ್ಕೆ ರೂಪದರ್ಶಿ

ಮಂಗಳೂರು: ರೂಪದರ್ಶಿ ಎಂದ ತಕ್ಷಣ ನಿಮ್ಮ ಗಮನ ಹರಿಯುದು ಚಿತ್ರರಂಗ ಅಥವಾ ಕ್ರಿಕೆಟ್‌ ಸಾಮ್ರಾಜ್ಯದ ಮಿನುಗು ತಾರೆಗಳ ಕಡೆಗೆ. ಇದರಲ್ಲಿ ತಪ್ಪೇನು ಇಲ್ಲ. ಈ ಕ್ಷೇತ್ರವೇ ಹೀಗೆ, ಹೆಸರುವಾಸಿ ಸೆಲೆಬ್ರೆಟಿಗಳನ್ನೇ ಹೆಚ್ಚಾಗಿ ಜಾಹಿರಾತಿಗಾಗಿ ಬಳಸಿಕೊಳ್ಳುವುದರಿಂದ ನಿಮ್ಮ ಯೋಚನೆ ತಪ್ಪಂತೂ ಅಲ್ಲವೇ ಅಲ್ಲ. ಹಾಗೆಂದಮಾತ್ರಕ್ಕೆ ಸೆಲೆಬ್ರೆಟಿಗಳಲ್ಲದವರು ಈ ಕ್ಷೇತ್ರದಲ್ಲಿ ಇಲ್ಲ ಎಂದರ್ಥವಲ್ಲ. ಒಂದಲ್ಲ ಒಂದು ಕಾರಣಕ್ಕೆ ಯಾವುದೇ ಕ್ಷೇತ್ರದಲ್ಲಿ ಹೆಸರು ಮಾಡಿದವರು ಜಾಹಿರಾತುಗಳಲ್ಲಿ ರೂಪದರ್ಶಿಯಾಗಿ ಮಿಂಚುವುದು ಇಲ್ಲದಿಲ್ಲ. ಈಗ ಅಂತಹದ್ದೇ ಒಂದು ಅವಕಾಶ ದಕ್ಷಿಣ ಕನ್ನಡದ ವ್ಯಕ್ತಿಯೊಬ್ಬರಿಗೆ

ಲಭಿಸಿದೆ. ಆಭರಣಗಳ ಜಾಹಿರಾತಿಗಾಗಿ ರೂಪದರ್ಶಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಜ್ಯುವೆಲ್ಲರಿ ಸಂಸ್ಥೆಯೊಂದು ಇಂತಹ ಸಾಹಸಕ್ಕೆ ಕೈಹಾಕಿದ್ದು ಸಾಧಾರಣ ವ್ಯಕ್ತಿಯೊಬ್ಬರನ್ನು ತನ್ನ ಜಾಹಿರಾತಿನಲ್ಲಿ ರೂಪದರ್ಶಿಯಾಗಿ ಬಳಸಿಕೊಂಡಿದೆ. ಕಂಬಳದ ಕೋಣಗಳನ್ನು ಕೆಸರುಗದ್ದೆಯ ಕರೆಗಳಲ್ಲಿ ಓಡಿಸುವ ಮೂಲಕ ಕಂಬಳದ ಹುಸೇನ್‌ ಬೋಲ್ಟ್‌ ಎಂದು ಹೆಸರು ಪಡೆದ ಶ್ರೀನಿವಾಸ ಗೌಡ ಎಂಬವರೇ ಈ ವ್ಯಕ್ತಿ. ಇವರನ್ನ ಜಾಹಿರಾತು ರೂಪದರ್ಶಿಯಾಗಿ ಬಳಸಿಕೊಂಡಿದ್ದು ಉಡುಪಿಯ ಖ್ಯಾತ ಜ್ಯುವೆಲ್ಲರಿ ಸಂಸ್ಥೆ”ಆಭರಣ”. ಮಿಜಾರು ಪ್ರಸಾದ್‌ ನಿಲಯದ ಶಕ್ತಿ ಪ್ರಸಾದ್‌ ಶೆಟ್ಟಿ ಅವರ ʼಅಪ್ಪುʼ ಎಂಬ ಕೋಣದೊಂದಿಗೆ ವಿವಿಧ ವಿನ್ಯಾಸದ ಆಭರಣ ತೊಟ್ಟು ನಿಂತಿರುವ ಶ್ರೀನಿವಾಸ್‌ ಗೌಡರವರ ಜಾಹಿರಾತು ಫಲಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಅಲ್ಲಲ್ಲಿ ಕಂಡು ಬರುತ್ತಿದೆ. “ಆಭರಣ” ಸಂಸ್ಥೆ ತನ್ನನ್ನು ರೂಪದರ್ಶಿಯಾಗಿಸಿದ್ದು ಖುಷಿ ತಂದಿದೆ ಎನ್ನುವ 31 ವರ್ಷದ ಶ್ರೀನಿವಾಸ ಗೌಡ ʼಆಭರಣʼ ಸಂಸ್ಥೆಗೆ ಕೃತಜ್ಞತೆ ಹೇಳಲು ಮರೆಯುವುದಿಲ್ಲ. ಈ ಜಾಹಿರಾತಿನ ಮೂಲಕ ಆಭರಣ ಸಂಸ್ಥೆ ರೂಪದರ್ಶಿಯ ಮಟ್ಟಿಗೆ ಹೊಸದೊಂದು ಭಾಷ್ಯವನ್ನೇ ಬರೆದಿದೆ. ʼನಮ್ಮ ಊರು, ನಮ್ಮ ನೀರುʼ ಎನ್ನುವಲ್ಲಿಗೆ ಹೊಸ ಸೇರ್ಪಡೆ ʼನಮ್ಮ ಜನʼ. ಏನಂತೀರಿ?....

LEAVE A REPLY

Please enter your comment!
Please enter your name here