ಮಂಗಳೂರು(ಉತ್ತರ ಪ್ರದೇಶ): ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡುವ ವಿವಾಹ ಎನ್ನುವುದು ಏಳೇಳು ಜನ್ಮದ ಬಂಧ ಎನ್ನಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಮಕ್ಕಳಾಟವಾಗಿದ್ದು, ಇದು ಹೆಚ್ಚು ಹೆಚ್ಚು ವಿಚ್ಛೇದನಕ್ಕೆ ಕಾರಣವಾಗುತ್ತಿದೆ. ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವ ವಿಚಾರ ಹೊಸ್ತಿಲು ದಾಟಿ ವಿಚ್ಛೇದನದವರೆಗೂ ಮುಂದುವರಿಯುತ್ತಿದೆ. ಕೆಲವೊಮ್ಮೆ ವಿಚ್ಛೇದನಕ್ಕೆ ಕಾರಣವೇ ಬೇಕಿಲ್ಲವೇನೋ ಎಂದೆನಿಸಿಬಿಡುತ್ತದೆ.
ಇಲ್ಲಿ ನಡೆದಿರುವುದು ಅದುವೇ, ವಿಚಿತ್ರ ಕಾರಣಕ್ಕೆ ಪತ್ನಿ ಗಂಡನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ. ಆಕೆ ಪತಿ ಕುರ್‌ಕುರೆ ತೆರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಆಘಾತಕಾರಿ ಮತ್ತು ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಕಳೆದ ವರ್ಷ ವಿವಾಹವಾಗಿದ್ದ ಜೋಡಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದೆ. ಆಕೆಗೆ ನಿತ್ಯವೂ ಕುರ್ಕುರೆ ತಿಂಡಿ ಸವಿಯುವ ಅಭ್ಯಾಸ. ಆಕೆಯ ಬೇಡಿಕೆಯಂತೆ ಪತಿ ಪ್ರತಿನಿತ್ಯ 5 ರೂಪಾಯಿ ನೀಡಿ ಕುರ್ಕರೆ ತಂದು ಕೊಡುತ್ತಿದ್ದ. ಯಾವತ್ತಾದರೊಂದು ದಿನ ಮರೆತುಬಿಟ್ಟರೆ ಅಂದು ಮನೆಯಲ್ಲಿ ಪತಿ ಪತ್ನಿ ನಡುವೆ ಜಗಳ ಗ್ಯಾರಂಟಿ. ನನಗೆ ಕುರ್ಕುರೆ ಬೇಕು ಬೇಕು ಎಂದು ಹಠ ಹಿಡಿದು ಮನೆಯಲ್ಲಿ ರಂಪಾಟ ಮಾಡುತ್ತಿದ್ದ ಆಕೆಯ ಮುಂದೆ ಆತ ಸೋತು ಹೋಗುತ್ತಿದ್ದ. ಆದರೆ ಅದೊಂದು ದಿನ ಕುರ್ಕುರೆಗಾಗಿ ಪತಿ ಪತ್ನಿ ನಡುವೆ ಜಗಳ ಇ ದೊಡ್ಡದಾಗಿ ನಡೆದು ಆಕೆ ಪತಿ ಮನೆ ತೊರೆದು ತವರು ಮನೆ ಸೇರಿದ್ದಳು. ಮಾತ್ರವಲ್ಲ ಕುರ್ಕುರೆ ತಂದು ಕೊಡದ ಪತಿಗೆ ವಿಚ್ಚೇದನ ನೀಡಲು ಮುಂದಾಗಿದ್ದಾಳೆ. ವರ್ಷದ ಹಿಂದೆ ಸಪ್ತಪದಿ ತುಳಿದ ಈ ದಂಪತಿಗಳನ್ನು ಆಗ್ರಾದ ಶಹಗಂಜ್ ಪೊಲೀಸರು ಕುಟುಂಬ ಸಮಾಲೋಚನೆಗಾಗಿ ಕಳುಹಿಸಿದ್ದು, ಕುರ್ಕುರೆಗಾಗಿ ತನ್ನ ಪತ್ನಿಯ ಅಸಾಮಾನ್ಯ ಬಯಕೆ ಕುರಿತು ಪತಿ ಕಳವಳ ವ್ಯಕ್ತಪಡಿಸಿದ್ದಾನೆ.
ಆದರೆ ಆತನ ಪತ್ನಿ ಇದಕ್ಕೆ ವ್ಯತಿರಿಕ್ತವಾಗಿ ನನ್ನ ಪತಿ ಕುರ್ಕುರೆ ತಂದುಕೊಡದೆ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾನೆ ಹೀಗಾಗಿ ನಾನು ತವರು ಮನೆ ಸೇರಿದೆ ಎಂದು ಪೊಲೀಸರ ಬಳಿ ಹಾಗೂ ವಕೀಲರ ಬಳಿ ವಿವರಿಸಿದ್ದಾಳೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕುರ್ಕುರೆಗಾಗಿ ವಿಚ್ಛೇದನವೇ ಎಂದು ಜನರು ಅಕ್ಷರಶಃ ಶಾಕ್ ಆಗಿದ್ದಾರೆ. ಈ ರೀತಿ ಕುರ್ಕುರೆಗಾಗಿ ವಿಚ್ಚೇದನ ಪಡೆಯಲು ಮುಂದಾದರೆ ಮುಂದೊಂದು ದಿನ ಸಮಾಜದಲ್ಲಿ ವಿವಾಹಿತರಿಗಿಂತಲೂ ವಿಚ್ಛೇದನ ಪಡೆದ ಜನರೇ ಹೆಚ್ಚಾಗಿರುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ರೀತಿ ಸಣ್ಣಪುಟ್ಟ ವಿಚಾರಕ್ಕೆ ವಿಚ್ಚೇದನ ಪಡೆಯುವ ಬದಲು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.