ಸುರತ್ಕಲ್‌ ಫಾಝಿಲ್‌ ಕುಟುಂಬಕ್ಕೆ ಸರಕಾರದ ಪರಿಹಾರ

ಮಂಗಳೂರು: ಸುರತ್ಕಲ್‌ನಲ್ಲಿ ಹತ್ಯೆಗೀಡಾದ ಮೊಹಮ್ಮದ್ ಫಾಝಿಲ್ ಕುಟುಂಬಕ್ಕೆ ಸರಕಾರದಿಂದ ಪರಿಹಾರ ದೊರಕಲಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿಇಂದು (ಜ.31) ನಡೆದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರಕ್ಕೆ ಸಲ್ಲಿಕೆಯಾಗಿರುವ ಪರಿಹಾರ ಲೀಸ್ಟ್‌ನಲ್ಲಿ ಅವರ ಹೆಸರಿದೆ ಎಂದು ಹೇಳಿದ್ದಾರೆ.

ಪ್ರವೀಣ್ ನೆಟ್ಟಾರ್‌ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ. ಅದೇ ರೀತಿಯಲ್ಲಿ ಫಾಝಿಲ್ ಕುಟುಂಬಕ್ಕೆ ಯಾಕೆ ಸಿಕ್ಕಿಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ ಶಾಸಕರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಫಾಝಿಲ್‌ ಮನೆಗೆ ತೆರಳಿ ಸಾಂತ್ವನ ಹೇಳದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಶಾಸಕರು ,ನಾನೂ ಅವರ ಮನೆಗೆ ಹೋಗಬೇಕೆಂದು ಬಯಸಿದ್ದೆ ಆದರೆ, ನನ್ನ ಭೇಟಿ ವೇಳೆ ಗಲಾಟೆ ನಡೆಸಲು ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಬಂದಿತ್ತು. ಈ ಹಿಂದೆ ದೀಪಕ್‌ ರಾವ್‌ ಹಾಗೂ ಇನ್ನೊಬ್ಬ ವ್ಯಕ್ತಿ ಮೃತಪಟ್ಟಾಗ ಸಂತ್ರಸ್ತರ ಮನೆಗೆ ಶಾಸಕರು ಭೇಟಿ ನೀಡಿದಾಗಲೂ ಘೆರಾವ್‌ ಹಾಕಲಾಗಿತ್ತು.ಈ ಹಿನ್ನೆಲೆಯಲ್ಲಿ ನನ್ನ ಭೇಟಿ ಗಲಾಟೆಗೆ ಕಾರಣವಾಗಬಾರದೆಂದು ನಾನವರ ಮನೆಗೆ ಹೋಗಿಲ್ಲ, ಎಂದು ಸ್ಪಷ್ಟನೆ ನೀಡಿದರು.

“ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿಯೇ ಫಾಝಿಲ್‌ ಹತ್ಯೆಯನ್ನು ನಡೆಸಲಾಗಿದೆ. ನಮ್ಮವರೇ ಈ ಕೃತ್ಯ ಮಾಡಿದ್ದಾರೆ” ಎಂದು ವಿಶ್ವಹಿಂದೂ ಪರಿಷತ್‌ನ ಮುಖಂಡ ಶರಣ್‌ ಪಂಪ್‌ವೆಲ್‌ ಬಹಿರಂಗ ಹೇಳಿಕೆ ನೀಡಿದ ಕುರಿತು ಪ್ರಶ್ನಿಸಿದಾಗ, ಮಾಹಿತಿಯಿಲ್ಲದೆ ಪ್ರತಿಕ್ರಿಯೆ ನೀಡುವುದು ಸರಿಯಾಗದು’ ಎಂದು ಹೇಳಿದರು.

LEAVE A REPLY

Please enter your comment!
Please enter your name here