ತಡವಾಗಿ ಬಂದ ಸಿಎಂ – ಸನ್ಮಾನ ನಿರಾಕರಿಸಿದ ಟೆನ್ನಿಸ್‌ ದಿಗ್ಗಜ ಬೋರ್ಗ್

ಬೆಂಗಳೂರು: ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೂವರೆ ಗಂಟೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಟೆನಿಸ್ ದಿಗ್ಗಜ, ಹನ್ನೊಂದು ಗ್ರಾನ್‌ ಸ್ಲಾಮ್ ಪ್ರಶಸ್ತಿ ವಿಜೇತ ಬ್ಯೋನ್ ಬೋರ್ಗ್ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ.

ಸ್ವೀಡನ್ ದೇಶದ ಬೋರ್ಗ್ ಅವರ ಪುತ್ರ ಲಿಯೊ ಬೋರ್ಗ್, ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಪುತ್ರನ ಆಟ ನೋಡಲು ಬೋರ್ಗ್ ಬೆಂಗಳೂರಿಗೆ ಬಂದಿದ್ದು, ಫೆ.21ರಂದು  ಭಾರತದ ಮಾಜಿ ಆಟಗಾರ ವಿಜಯ್ ಅಮೃತ್‌ರಾಜ್ ಮತ್ತು ಬೋರ್ಗ್ ಅವರನ್ನು ಬಸವರಾಜ ಬೊಮ್ಮಾಯಿ ಸನ್ಮಾನಿಸುವ ಕಾರ್ಯಕ್ರಮವನ್ನು ಬೆಳಿಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ಬರುವುದು ತಡವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು 10.15ಕ್ಕೆ ಮುಂದೂಡಲಾಗಿತ್ತು. ಗಂಟೆ  11 ಆದರೂ ಸಿಎಂ ಬರಲಿಲ್ಲ ಎನ್ನುವ ಕಾರಣಕ್ಕೆ ಕಾರ್ಯಕ್ರಮವೂ ಆರಂಭವಾಗಿರಲಿಲ್ಲ.ಇತ್ತ ಬೋರ್ಗ್ ಪುತ್ರ ಲಿಯೊ ಅವರ ಪಂದ್ಯ ಬೆಳಿಗ್ಗೆ 11ಕ್ಕೆ ನಿಗದಿಯಾಗಿತ್ತು. ಮಗನ ಆಟ ನೋಡಲು ಬೋರ್ಗ್  ಗ್ಯಾಲರಿಯಲ್ಲಿ ಕುಳಿತುಕೊಂಡರು. ಈ ಪಂದ್ಯ ಆರಂಭವಾದ ಕೆಲವೇ ಹೊತ್ತಿನಲ್ಲಿ ಬೊಮ್ಮಾಯಿ  ಸಮಾರಂಭಕ್ಕೆ ಆಗಮಿಸಿದ್ದು ವಿಷಯವನ್ನು ಬೋರ್ಗ್ ಗಮನಕ್ಕೆ ತರಲಾಯಿತು. ಪಂದ್ಯ ಮುಗಿದ ಬಳಿಕವಷ್ಟೇ ಬರುವುದಾಗಿ ಬೋರ್ಗ್‌ ಹೇಳಿದ ಕಾರಣ ಆಯೋಜಕರು ನಿಗದಿತ ಸನ್ಮಾನ ಕಾರ್ಯಕ್ರಮವನ್ನು  ರದ್ದುಗೊಳಿಸಬೇಕಾಯಿತು. ನಿಗದಿತ ಕಾರ್ಯಕ್ರಮಗಳಿಂದಾಗಿ ಮುಖ್ಯಮಂತ್ರಿ ತಡವಾಗಿ ಬಂದರು ಎಂದು ಸಂಘಟನಾ ಸಮಿತಿಯ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದ್ದಾರೆ.

LEAVE A REPLY

Please enter your comment!
Please enter your name here