ಮಂಗಳೂರು: ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ತಾಪಮಾನ 38.8 ಡಿ.ಸೆ. ದಾಖಲಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಗಣನೀಯವಾಗಿ ಏರಿಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ನಡುವೆ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾ. 2ರಂದು ಮಂಗಳೂರಿನಲ್ಲಿ ದೇಶದಲ್ಲಿಯೇ ಗರಿಷ್ಠ ಎನಿಸಿದ್ದ 37.9 ಡಿ.ಸೆ. ದಾಖಲಾಗಿತ್ತು. ಒಂದು ವಾರದ ಅಂತರದಲ್ಲಿ ತಾಪಮಾನದಲ್ಲಿ ಭಾರೀ ಏರಿಕೆ ಕಂಡಿದೆ. ಇದು ಸಾಮಾನ್ಯ ತಾಪಮಾನಕ್ಕಿಂತ 5.4 ಡಿ.ಸೆ. ಹೆಚ್ಚಾಗಿದೆ. ಈ ಬಾರಿ ಬೇಸಗೆಯು ವಾಡಿಕೆಗಿಂತ ಮೊದಲೇ ಪ್ರಾರಂಭವಾಗಿದೆ. ಮಾರ್ಚ್ ಎರಡನೇ ವಾರದಿಂದ ಬಿಸಿಲ ತೀವ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಮುಂದಿನ 48 ಗಂಟೆಗಳಲ್ಲಿ ಗರಿಷ್ಠ ಉಷ್ಣಾಂಶವು ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವೆಡೆ 2-3 ಡಿ.ಸೆ. ಏರಿಕೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಮಾ.14ರಂದು ಕರಾವಳಿಯಲ್ಲಿ ಮತ್ತು 15ರಂದು ರಾಜ್ಯದ ಹೆಚ್ಚಿನ ಕಡೆ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡಾಮ್ ನಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು ಇದು ಕಳೆದ 4 ವರ್ಷದಲ್ಲಿ ಅತ್ಯಂತ ಕಡಿಮೆ ನೀರಿನ ಪ್ರಮಾಣ ಎಂದು ಹೇಳಲಾಗಿದೆ. ಈಗಿರುವ ನೀರು 45ರಿಂದ 50 ದಿನಗಳವರೆಗೆ ಪೂರೈಸುವಷ್ಟಿದ್ದು ಸಕಾಲದಲ್ಲಿ ಮಳೆ ಬಾರದಿದ್ದಲ್ಲಿ ಮಂಗಳೂರನ್ನು ನೀರಿನ ಬರ ಕಾಡಲಿದೆ.