ಮಂಗಳೂರು: ಚಿತ್ರದಲ್ಲಿ ಕಾಣುವ ಈ ಯುವತಿ ಸಿನಿಮಾ ತಾರೆಯಾಗಿರಬಹುದೆಂದು ನೀವಂದು ಕೊಂಡರೆ ಖಂಡಿತ ತಪ್ಪು. ವಾಸ್ತವದಲ್ಲಿ ಇವಳು ಅವಳಲ್ಲ. ಹಾಗಂದ ಮಾತ್ರಕ್ಕೆ ತಪ್ಪು ಯೋಚನೆ ಮಾಡಬೇಡಿ. ನಾವು ಹೇಳಿದಂತೆ ಚಿತ್ರದಲ್ಲಿ ಇರುವ ವ್ಯಕ್ತಿ ಇವಳು ಅವಳಲ್ಲ, ಅವನು ಎಂದರೆ ಅಚ್ಚರಿಯಾಗಬಹುದು. ಕೊಲ್ಲಂ ಜಿಲ್ಲೆಯಲ್ಲಿ ನಡೆದ ಕೊಟ್ಟಕುಳಂಗರ ಚಾಮಾಯವಿಲಕ್ಕು ಉತ್ಸವದಲ್ಲಿ ಮಹಿಳೆಯಂತೆ ಮೇಕಪ್ ಮಾಡಿ ರೂಪಾಂತರಗೊಳ್ಳುವ ಸ್ಪರ್ಧೆಯಲ್ಲಿ ಈ ವ್ಯಕ್ತಿಯು ಪ್ರಥಮ ಬಹುಮಾನಗಳಿಸಿದ್ದಾರೆ.
ಕೊಲ್ಲಂ ಜಿಲ್ಲೆಯ ಪ್ರಮುಖ ಚವರ ಕೋಟಂಕುಲಂಗರ ದೇವಿ ದೇವಸ್ಥಾನವು ಕೇರಳದ ವನದುರ್ಗದ ಪವಿತ್ರ ಪುರಾತನ ದೇವಾಲಯ. ಈ ದೇವಸ್ಥಾನದಲ್ಲಿ ಪುರುಷರು ಸ್ತ್ರೀ ರೂಪ ಧರಿಸಿ ಹಬ್ಬವೊಂದನ್ನು ವಿಶೇಷವಾಗಿ ಆಚರಿಸುವುದು ಈ ಭಾಗದ ಸಂಪ್ರದಾಯ. ಪ್ರಸಿದ್ಧ ತಿರುವಿತಾಂಕೂರ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಾಲಯವು ತಮ್ಮ ಕಾರ್ಯಗಳ ಸಿದ್ಧಿಗಾಗಿ ಪುರುಷರು ಮಹಿಳೆಯರಂತೆ ವೇಷ ಧರಿವುದು ವಾಡಿಕೆ. ಹೆಣ್ಣಿನಂತೆ ಸೀರೆಯುಟ್ಟು, ಕಣ್ಣಿಗೆ ಕಾಡಿಗೆ, ಕಿವಿಯೋಲೆ, ಮೂಗುತಿ, ತಲೆಗೆ ಮಲ್ಲಿಗೆ ಹೂ ಮುಡಿದು ವಿಶೇಷ ಅಲಂಕಾರ ಮಾಡಿಕೊಂಡ ಪುರುಷರು ದೀಪ ಹಚ್ಚಿ ಹಬ್ಬ ಆಚರಿಸಿ ಗಮನ ಸೆಳೆಯುತ್ತಾರೆ.
ಹೆಣ್ಣಿನ ಸೌಂದರ್ಯಕ್ಕೆ ಹೊಸ ಭಾವರೂಪ ನೀಡಿ ಇಷ್ಟಾರ್ಥ ಸಿದ್ಧಿಗಾಗಿ ಪುರುಷರು ಇಲ್ಲಿಗೆ ಬರುತ್ತಾರೆ. ಜರತಾರಿ ಸೀರೆ, ಮಹಿಳೆಯರ ಆಧುನಿಕ ಉಡುಗೆ, ವಿವಿಧ ಸ್ತ್ರೀಯರ ಉಡುಪುಗಳನ್ನು ಧರಿಸಿದ ಪುರುಷರು, ಯಾವುದೇ ಸುಂದರಿಯರನ್ನು ಮೀರಿಸುವಂತೆ ಎಲ್ಲರ ಗಮನಸೆಳೆಯುವುದನ್ನು ಇಲ್ಲಿ ಕಾಣಬಹುದಾಗಿದೆ. ಈ ಹಬ್ಬವನ್ನು ಮಾರ್ಚ್ 24 ಮತ್ತು 25 ರಂದು ಆಚರಿಸಲಾಗುತ್ತದೆ. ಎರಡು ದಿನಗಳ ಈ ಸಂಪ್ರದಾಯವು ಹೆಣ್ಣಾಗಿ ಬಾಳಬಯಸುವ ಪುರುಷರಿಗೆ ಸ್ವಾತಂತ್ರ್ಯ ನೀಡುತ್ತದೆ. ಮಾತು, ನೋಟದಿಂದಲೇ ಹೆಣ್ಣಾಗಿ ಮೆರೆದ ಸಾವಿರಕ್ಕೂ ಹೆಚ್ಚು ಪುರುಷ ಸುಂದರಿಯರ ಮಾಯಾಲೋಕವೇ ಇಲ್ಲಿ ಸೃಷ್ಟಿಯಾಗುತ್ತದೆ. ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ವಿಶಿಷ್ಟ ಪದ್ಧತಿ ಚಾವರ ಕೋಟಂಕುಳಂಗರ ಚಮಯವಿಳಕ್ ಹಬ್ಬವಾಗಿದೆ. ಪ್ರತಿವರ್ಷ ಮಾರ್ಚ್ 24 ಮತ್ತು 25 ರಂದು ಸ್ತ್ರೀ ವೇಷ ಧರಿಸುವ ಪುರುಷರ ಸೌಂದರ್ಯ ಸ್ಪರ್ಧೆ ಇಲ್ಲಿ ನಡೆಯುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ವಿದೇಶಿಗರು ಮತ್ತು ಸ್ಥಳೀಯರು ದೇವಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಹೆಣ್ಣಿನ ವೇಷ ಧರಿಸಿ ದೀಪವನ್ನು ಹಚ್ಚಿದರೆ, ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಈ ಭಾಗದ ಗಾಢವಾದ ನಂಬಿಕೆಯಿದೆ.
ಮೇಲಿನ ಚಿತ್ರದಲ್ಲಿ ಕಾಣುವ ವ್ಯಕ್ತಿ ಈ ವರ್ಷ ನಡೆದ ಮಹಿಳಾ ಮೇಕಪ್ ಸ್ಪರ್ಧೆಯಲ್ಲಿ ಮಹಿಳೆಯಂತೆ ವೇಷ ಧರಿಸಿ ಮೊದಲ ಸ್ಥಾನ ಪಡೆದಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ