ಮುಂದಿನ ಸಚಿವ ಸಂಪುಟ ಸಭೆ ಬಳಿಕ ರಾಜ್ಯಾದ್ಯಾಂತ ‘ಗ್ಯಾರಂಟಿ’ ಜಾರಿ
‘ಗ್ಯಾರಂಟಿ ಕಾರ್ಡ್’ ಭರವಸೆಗಳನ್ನು ಈಡೇರಿಸಲು 50 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ
ಬೆಂಗಳೂರು: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಪ್ರಥಮ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನೂತನ ಸರಕಾರದ ಸುದ್ದಿಗೋಷ್ಠಿ ನಡೆಸಿದರು . ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು. ಕಳೆದ ಸಲ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 158 ಭರವಸೆಗಳನ್ನು ಈಡೇರಿಸಿದ್ದೇವೆ ಮಾತ್ರವಲ್ಲದೇ ಇಂದಿರಾ ಕ್ಯಾಂಟೀನ್, ಶೂ ಭಾಗ್ಯದಂತಹ ಕೆಲವೊಂದು ಹೆಚ್ಚಿನ ಯೋಜನೆಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ ಅವರು ಈ ಬಾರಿಯೂ ನಾವು ಚುನಾವಣಾ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಬದ್ಧವಾಗಿದ್ದು ಅದಕ್ಕೆ ಪ್ರಥಮ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ರೂಪುರೇಷಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
‘ಗ್ಯಾರಂಟಿ ಕಾರ್ಡ್’ನಲ್ಲಿ ನೀಡಲಾಗಿರುವ ಭರವಸೆಗಳನ್ನು ಈಡೇರಿಸಲು 50 ಸಾವಿರ ಕೋಟಿ ರೂಪಾಯಿಗಳ ಅಗತ್ಯವಿದೆ. ನಮ್ಮ ಬಜೆಟ್ ನ ಗಾತ್ರ 3 ಲಕ್ಷದ 10 ಸಾವಿರ ಕೋಟಿ ಆಗಿದೆ, ಇದು ಪ್ರತೀ ವರ್ಷ 10% ಹೆಚ್ಚಾಗುತ್ತಿರುತ್ತದೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸದೇ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಲು ನಾವು ಬದ್ಧವಾಗಿದ್ದೇವೆ.
15ನೇ ಹಣಕಾಸು ಆಯೋಗದಿಂದ ಈ ವರ್ಷ ನಮಗೆ ಕೇಂದ್ರದಿಂದ 50 ಸಾವಿರ ಕೋಟಿ ರಾಜ್ಯಕ್ಕೆ ಬರುತ್ತದೆ. ಕಟ್ಟುನಿಟ್ಟಿನ ತೆರಿಗೆ ವಸೂಲಿ, ಜಿಎಸ್.ಟಿ ಪಾಲು ಮತ್ತು ಅನವಶ್ಯಕ ಖರ್ಚುಗಳ ಮೇಲೆ ಕಡಿವಾಣ ಹಾಕುವುದರಿಂದ ಈ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಹಣ ಹೊಂದಿಸಲಾಗುವುದು ಎಂದರು.
200 ಯುನಿಟ್ ವಿದ್ಯುತ್ ಉಚಿತ ಯೋಜನೆಗೆ ತಿಂಗಳಿಗೆ ಅಂದಾಜು 1200 ಕೋಟಿ ಹೊರೆ ಬೀಳಲಿದೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಗೃಹಿಣಿಗೆ ಪ್ರತೀ ತಿಂಗಳು 2000 ರೂಪಾಯಿ ಬ್ಯಾಂಕ್ ಅಕೌಂಟಿಗೆ ಜಮಾ, ಅನ್ನಭಾಗ್ಯದಲ್ಲಿ 10 ಕೆಜಿ ಅಕ್ಕಿ ಉಚಿತ, ಈ ವರ್ಷದ ನಿರುದ್ಯೋಗಿ ಪದವೀಧರರಿಗೆ ‘ಯುವ ನಿಧಿ’ ಯೋಜನೆಯಲ್ಲಿ 2 ವರ್ಷದವರೆಗೆ ಪ್ರತೀ ತಿಂಗಳಿಗೆ 3000 ರೂಪಾಯಿ, ಡಿಪ್ಲೊಮಾ ಪಾಸಾಗಿರುವ ನಿರುದ್ಯೋಗಿಗಳಿಗೆ ಪ್ರತೀ ತಿಂಗಳಿಗೆ 1500 ರೂಪಾಯಿ, ಸರಕಾರಿ ಬಸ್ಸಿನಲ್ಲಿ ಓಡಾಡುವ ಕರ್ನಾಟಕದ ಮಹಿಳೆಯರಿಗೆ ಫ್ರೀ ಪಾಸ್. ಇಂದಿರಾ ಕ್ಯಾಂಟೀನ್ ಪುನಾರರಂಭಗೊಳ್ಳಲಿದೆ ಎಂದರು.
ಸೋಮವಾರ, ಮಂಗಳವಾರ, ಬುಧವಾರ ವಿಧಾನಸಭೆ ಅಧಿವೇಶನ ಕರೆಯಲಾಗಿದೆ. ಇಲ್ಲಿ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಮತ್ತು ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.