ಮಂಗಳೂರು: ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ವಿಪಕ್ಷ ನಾಯಕನ ಆಯ್ಕೆ ಸಂಬಂಧ ಚರ್ಚೆ ನಡೆಸಲು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿಯಾದರು. ಬೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಯಡಿಯೂರಪ್ಪ ವೀಕ್ಷಕರಾಗಿ ವಿನೋದ್ ತಾವಡೇ ಮತ್ತು ಮನ್ಸುಕ್ ಮಾಂಡವೀಯ ಬೆಂಗಳೂರಿಗೆ ಬರಲಿದ್ದು ಶಾಸಕರ ಜೊತೆ ಚರ್ಚಿಸಿ ಎಲ್ಲಾ ವಿವರ ವರಿಷ್ಠರಿಗೆ ತಿಳಿಸಲಿದ್ದಾರೆ. ವೀಕ್ಷಕರು ನೀಡುವ ವರದಿ ಆಧರಿಸಿ ವಿಪಕ್ಷ ನಾಯಕರ ನೇಮಕ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ. ಇನ್ನೂ ಎರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕರ ಆಯ್ಕೆ ಆಗಲಿದೆ ಎಂದು ಹೇಳಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ಐದು ಗ್ಯಾರಂಟಿ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ತಮ್ಮ ಆಶ್ವಾಸನೆ ಈಡೇರಿಸದೆ ಮಾತಿಗೆ ತಪ್ಪಿದೆ ಇದರ ವಿರುದ್ಧ “ಮೋಸ ನಿಲ್ಲಿಸಿ” “ಗ್ಯಾರಂಟಿ ಜಾರಿಗೊಳಿಸಿ” ಹೋರಾಟಕ್ಕೆ ಬಿಜೆಪಿ ಮುಂದಾಗಿದೆ ಎಂದು ಹೇಳಿದ್ದಾರೆ.