ಸಮಾಜಕ್ಕೆ ಉತ್ತಮ ಆಲೋಚನೆಗಳನ್ನು ನೀಡುವುದು ನಮ್ಮ ಜವಾಬ್ದಾರಿ – ಸ್ವಾಮಿ ನಿತ್ಯಸ್ಥಾನಂದಜಿ

    ಮಂಗಳೂರು: “ಸಮಾಜ ಕೆಟ್ಟದು ಎಂದು ದೂರುತ್ತಾ ಕೂರುವುದು ನಮ್ಮ ಕೆಲಸವಲ್ಲ. ಅದನ್ನು ಹೇಗೆ ಸರಿಪಡಿಸುವುದು ಎಂದು ಆಲೋಚಿಸಬೇಕು ಮತ್ತು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಸಮಾಜಕ್ಕೆ ನಾವು ಉತ್ತಮವಾದ ಆಲೋಚನೆಗಳನ್ನು ನೀಡಬೇಕು- ಇದು ನಮ್ಮ ಕರ್ತವ್ಯ, ನಾವು ಕೇವಲ ಕೆಲಸವನ್ನು ನಮ್ಮ ಉದ್ಧಾರಕ್ಕಾಗಿ ಅಥವಾ ನಮ್ಮ ಉನ್ನತಿಗಾಗಿ ಮಾಡುತ್ತೇವೆ. ಆದರೆ ಕೆಲಸವನ್ನು ಪ್ರೀತಿಯಿಂದ ಮಾಡಿದಾಗ ಅದು ಸೇವೆಯಾಗುತ್ತದೆ ಮತ್ತು ಇದರಿಂದ ಸಮಾಜದ ಉದ್ಧಾರ ಸಾಧ್ಯ. ಕೆಲಸದ ರೀತಿ ನೀತಿಗಳು ಬದಲಾಗುವುದಿಲ್ಲ. ಆದರೆ ನಾವು ಅದನ್ನು ನೋಡುವ ದೃಷ್ಟಿ ಬದಲಾಗಬೇಕಾಗಿದೆ. ಈ ವಿಚಾರಗಳನ್ನು ನಾವು ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಕಾಣಬಹುದು” ಎಂದು ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ನಿತ್ಯಸ್ಥಾನಂದಜಿ ಅವರು ಹೇಳಿದರು.

    ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಇಪ್ಪತ್ತೆಂಟನೇ ಉಪನ್ಯಾಸದಲ್ಲಿ “ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿ” ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಮಂಗಳೂರಿನ ನೀರುಮಾರ್ಗದ ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ನಡೆಯಿತು. ಸ್ವಾಮೀಜಿಯವರ ಭಾಷಣದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಸ್ವಾಮೀಜಿಯವರು ಉತ್ತರಿಸಿದರು. ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯಕ್ರಮಗಳ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ಸಂವಾದ ಕಾರ್ಯಕ್ರಮ ನಿರ್ವಹಿಸಿದರು.

    ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ್ ರಾವ್, ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನ ಉಪಪ್ರಾಂಶುಪಾಲ ಪ್ರೊ. ಗೀತಾಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಧರ್ಮರಾಜ್ ಕೆ. ಕಾರ್ಯನಿರವಹಣಾಧಿಕಾರಿ ರಮೇಶ್ ನಾಯಕ್, ಆರ್ಟ್ಸ್ ಕ್ಲಬ್ ಸಂಯೋಜಕ ಅಕ್ಷತಾ ಆಳ್ವ, ಎನ್. ಎಸ್. ಎಸ್. ಯೋಜನಾಧಿಕಾರಿ ಮಿಥುನ್ ವೇಣುಗೋಪಾಲ್, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜೇಶ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನ ವಿದ್ಯಾರ್ಥಿಗಳು ಭಾಗವಹಿಸಿದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿದರು. ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನ ಪ್ರಾಂಶುಪಾಲರಾದ ಪ್ರೊ. ಪ್ರತಿಜ್ಞಾ ಸುಹಾಸಿನಿ ವಂದಿಸಿದರು.

    LEAVE A REPLY

    Please enter your comment!
    Please enter your name here