ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕರಾಗಿ ಡಾ.ಚಂದ್ರ ಪೂಜಾರಿ ನೇಮಕ

ಮಂಗಳೂರು /ಪುತ್ತೂರು: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕರಾಗಿ ನಿವೃತ್ತ ಪ್ರಾಧ್ಯಾಪಕ , ಲೇಖಕ , ಚಿಂತಕ ಡಾ.ಚಂದ್ರ ಪೂಜಾರಿ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.

ಧಾರವಾಡದಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಉನ್ನತ ಶಿಕ್ಷಣ ಅಕಾಡೆಮಿಯು ರಾಜ್ಯದ ಉನ್ನತ ಶಿಕ್ಷಣದ ನೀತಿ ನಿರೂಪಣೆಯನ್ನು ಸಿದ್ಧಗೊಳಿಸುವಲ್ಲಿ ಸರಕಾರಕ್ಕೆ ಸಲಹೆ , ಮಾರ್ಗಸೂಚಿಗಳನ್ನು ನೀಡುವ ಅತ್ಯುನ್ನತ ಸಂಸ್ಥೆಯಾಗಿದೆ. ಡಾ.ಚಂದ್ರ ಪೂಜಾರಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಹಾವೇರಿ ಜಾನಪದ ವಿಶ್ವವಿದ್ಯಾಲಯದ ಅನ್ವಯಿಕ ಜಾನಪದ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ.

ಸಮಾಜ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಡಾ.ಚಂದ್ರ ಪೂಜಾರಿ ಅವರು ಪ್ರಥಮ ಬಾರಿಗೆ ರಾಜ್ಯದಲ್ಲಿ ದಲಿತ್ ಡೆವೆಲಪ್ಮೆಂಟ್ ಇಂಡೆಕ್ಸ್ ಸಿದ್ಧಗೊಳಿಸಿದ ತಜ್ಞರಾಗಿದ್ದಾರೆ.‌ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಕೋರ್ ಕಮಿಟಿ ಸದಸ್ಯರಾಗಿ, ಸ್ಟೇಟ್ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ ಕೋರ್ ಕಮಿಟಿ ಸದಸ್ಯರಾಗಿ , ರಾಜ್ಯ ಆಡಳಿತ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿ, ಮೈಸೂರಿನ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದರು.ಒಟ್ಟು 22 ಕೃತಿಗಳನ್ನು ಬರೆದಿರುವ ಡಾ.ಚಂದ್ರ ಪೂಜಾರಿ ಅವರು , ವಿಜಯ ಕರ್ನಾಟಕ , ಕನ್ನಡ ಪ್ರಭ ಪತ್ರಿಕೆಯ ಅಂಕಣಗಾರರಾಗಿ, ಪ್ರಜಾವಾಣಿ ಪತ್ರಿಕೆಯ ಲೇಖಕರಾಗಿ ನಿರಂತರವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡವರು.‌ ರಾಜ್ಯದ ವಿವಿಧ ಟಿ.ವಿ.ಮಾಧ್ಯಮಗಳಲ್ಲಿ ನಿರಂತರವಾಗಿ ವಿಚಾರ ಮಂಡನೆ ಮಾಡುತ್ತಿರುವರಾಗಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ಕುಂಜೂರುಪಂಜದವರಾದ ಚಂದ್ರ ಪೂಜಾರಿ ಅವರು, ಸೈಂಟ್ ಫಿಲೋಮಿನಾ ಹೈಸ್ಕೂಲ್ , ಹಾಗೂ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು . ಎಂ.ಕಾಮ್ ಅಧ್ಯಯನವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಿದ್ದರು, ಇದೇ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದರು.‌

LEAVE A REPLY

Please enter your comment!
Please enter your name here